Breaking
17 Jul 2026, Fri

ಮಂಗಳೂರು: ಎಂಟು ವರ್ಷದ ಬಾಲಕಿ ಸ್ಕಾರ್ಲೆಟ್ ರೊಡ್ರಿಗಸ್ ಚೊಚ್ಚಲ ಕೃತಿ ಲೋಕಾರ್ಪಣೆ

ಮಂಗಳೂರು: ನಗರದ ಎಂಟು ವರ್ಷದ ಪ್ರತಿಭಾವಂತ ಬಾಲಕಿ ಸ್ಕಾರ್ಲೆಟ್ ರೊಡ್ರಿಗಸ್ ಅವರ ಚೊಚ್ಚಲ ಕೃತಿ “The Wonderful World of Scarlett” ಅನ್ನು ಬಿಕರ್ನಕಟ್ಟೆಯ ಶಿಶು ಯೇಸು ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಮೌಂಟ್ ಕಾರ್ಮೆಲ್ ಮಾತೆಯ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಿಶು ಯೇಸು ದೇವಾಲಯದ ನಿರ್ದೇಶಕ ರೆವ. ಫಾ. ಸ್ಟಿಫನ್ ಪಿರೇರಾ, OCD ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಮತ್ತು ಟಿವಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ ಸ್ಕಾರ್ಲೆಟ್ ಅವರ ಓದು ಮತ್ತು ಬರವಣಿಗೆಯ ಆಸಕ್ತಿ ಇತರ ಮಕ್ಕಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮಂಗಳೂರಿನ ಸೇಂಟ್ ತೆರೆಸಾ ಶಾಲೆಯ ವಿದ್ಯಾರ್ಥಿನಿಯಾಗಿರುವ ಸ್ಕಾರ್ಲೆಟ್, ಕುಲಶೇಖರದ ಶ್ರೀಶಾ ಮತ್ತು ನೋಯೆಲ್ ರೊಡ್ರಿಗಸ್ ದಂಪತಿಯ ಪುತ್ರಿಯಾಗಿದ್ದು, ಬಾಲ್ಯದಿಂದಲೇ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅದೇ ಆಸಕ್ತಿ ಕಥೆ ಹಾಗೂ ಕವನಗಳನ್ನು ರಚಿಸುವ ಮಟ್ಟಕ್ಕೆ ಬೆಳೆದು, ಇದೀಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.

ಈ ಕೃತಿ Excel – Institute of Excellence ಸಂಸ್ಥೆಯ ಮಾರ್ಗದರ್ಶನದಲ್ಲಿ ರೂಪುಗೊಂಡಿದೆ.

ಕಾರ್ಯಕ್ರಮದಲ್ಲಿ ರೆವ. ಫಾ. ಜೋಸಿ ಸಿದ್ದಕಟ್ಟೆ, OCD, ಶ್ರೀಮತಿ ಶ್ರೀಶಾ ರೊಡ್ರಿಗಸ್, ದೇವಾಲಯದ ಭಕ್ತರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದು, ಕಿರಿಯ ಲೇಖಕಿಯ ಸಾಧನೆಯನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *