ಬಿ.ಸಿ.ರೋಡು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಮೀಪ ಕಳೆದ ವರ್ಷ ನಿರ್ಮಾಣಗೊಂಡ ನೂತನ ವಾಣಿಜ್ಯ ಸಂಕೀರ್ಣವೊಂದರ ಬಳಿ ರಾಶಿ ರಾಶಿಯಾಗಿ ಕಸ ಹಾಗೂ ವಿವಿಧ ತ್ಯಾಜ್ಯಗಳು ಬಿದ್ದಿದ್ದು, ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಸಂಕೀರ್ಣದ ಸುತ್ತಮುತ್ತ ಕಸ ತೆರವು ಮಾಡದೇ ಇರುವುದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಳೆ ಸಂದರ್ಭಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದ್ದು, ಆರೋಗ್ಯ ಸಮಸ್ಯೆಗಳ ಭೀತಿ ಎದುರಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಇಷ್ಟೆಲ್ಲ ಸಮಸ್ಯೆ ಕಂಡುಬರುತ್ತಿದ್ದರೂ ಪುರಸಭೆ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಇದು ಏಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತಕ್ಷಣ ಕಸ ತೆರವುಗೊಳಿಸಿ ಸ್ವಚ್ಛತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ



