ಬೆಂಗಳೂರು: ಖ್ಯಾತ ಕನ್ನಡ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ಅಪಾರ ನಷ್ಟವಾಗಿದೆ. ಹಲವು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಸಹಜ ಅಭಿನಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.
‘ಮಿಲನ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ದಿಲೀಪ್ ರಾಜ್ ಅವರು, ಕಿರುತೆರೆಯಲ್ಲೂ ಜನಪ್ರಿಯರಾಗಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅವರು ಅಭಿನಯಿಸಿದ್ದು, ‘ಪಾರು’ ಹಾಗೂ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

ಮನೆಯಲ್ಲೇ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಅನೇಕ ಗಣ್ಯರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ದಿಲೀಪ್ ರಾಜ್ ಅವರ ಅಗಲಿಕೆಯಿಂದ ಕನ್ನಡ ಸಿನಿ ಮತ್ತು ಕಿರುತೆರೆ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


