Breaking
13 May 2026, Wed

ಮಂಗಳೂರು: ₹35 ಲಕ್ಷ ಮೌಲ್ಯದ ಹೈಡ್ರೊವೀಡ್ ಗಾಂಜಾ ವಶ – ಬಿಸಿಎ ವಿದ್ಯಾರ್ಥಿನಿ ಅರೆಸ್ಟ್

ಮಂಗಳೂರು: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿತೆಯನ್ನು ಮುಲ್ಕಿ ಪೊಲೀಸರು ಬಂಧಿಸಿ ಸುಮಾರು ₹35 ಲಕ್ಷ ಮೌಲ್ಯದ ಹೈಡ್ರೊವೀಡ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತೆಯನ್ನು ಸುಹಾನ ಎಂದು ಗುರುತಿಸಲಾಗಿದ್ದು, ಆಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದಾಳೆ. ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ವಶಕ್ಕೆ ಪಡೆದರು. ಆಕೆಯ ಬಳಿ ಇದ್ದ ಸುಮಾರು 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಆರೋಪಿತೆ ಮಾದಕ ವಸ್ತುವನ್ನು ಚೆನ್ನೈನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದಿಸಲು ಯತ್ನಿಸಿದ್ದಳು ಎಂದು ತಿಳಿದುಬಂದಿದೆ.

ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಆರೋಪಿತೆಯ ವಿರುದ್ಧ ಈಗಾಗಲೇ ಕಾವೂರು ಪೊಲೀಸ್ ಠಾಣೆ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ಕಸ್ಟಮ್ಸ್ ವಿಭಾಗದಲ್ಲೂ ಪ್ರಕರಣಗಳು ದಾಖಲಾಗಿರುತ್ತದೆ

ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *