Breaking
13 May 2026, Wed

ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಏರಿಕೆ ಸಾಧ್ಯ: ಆಮದು ಸುಂಕ 15%ಕ್ಕೆ ಹೆಚ್ಚಿಸಿದ ಕೇಂದ್ರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಮೇಲಿನ ಒಟ್ಟು ಆಮದು ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ 15%ಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ನಿರ್ಧಾರದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ವ್ಯಕ್ತವಾಗಿದೆ.

ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವುದು ಹಾಗೂ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಮೂಲ ಕಸ್ಟಮ್ಸ್ ಸುಂಕ 5% ಇದ್ದು, ಅದನ್ನು ಇದೀಗ 10%ಕ್ಕೆ ಏರಿಕೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ (AIDC) 5% ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಇದರೊಂದಿಗೆ ಒಟ್ಟು ಆಮದು ಸುಂಕ 15%ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಚಿನ್ನದ ಖರೀದಿ ಹಾಗೂ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಚಿನ್ನದ ಆಮದು ಕೂಡ ಹೆಚ್ಚಳ ಕಂಡಿತ್ತು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಸುಂಕ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ.

ಆಮದು ಸುಂಕ ಏರಿಕೆಯ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತಕ್ಷಣವೇ ಏರಿಕೆಯಾಗುವ ಸಾಧ್ಯತೆ ಇದೆ. ಮುಂಬರುವ ಹಬ್ಬ ಹಾಗೂ ಮದುವೆ ಸೀಸನ್‌ ಹಿನ್ನೆಲೆಯಲ್ಲಿ ಆಭರಣ ಖರೀದಿಸುವ ಗ್ರಾಹಕರು ಮೇಕಿಂಗ್ ಚಾರ್ಜ್, ಜಿಎಸ್ಟಿ ಜೊತೆಗೆ ಹೆಚ್ಚುವರಿ ಸುಂಕದ ಭಾರವನ್ನೂ ಎದುರಿಸಬೇಕಾಗಬಹುದು.

Leave a Reply

Your email address will not be published. Required fields are marked *