ಸುಳ್ಯ: ಕುಸಿದು ಬಿದ್ದು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಬೇರ್ಯ ನಿವಾಸಿ ಮಂಜು ಪಿ (42) ಎಂದು ಗುರುತಿಸಲಾಗಿದೆ.

ಎಂದಿನಂತೆ ಕಾಲೇಜಿಗೆ ಹಾಜರಾದ ಮಂಜು ಅವರು ಬೆಳಿಗ್ಗೆ ತರಗತಿಗಳನ್ನು ನಡೆಸಿ ಮಧ್ಯಾಹ್ನದ ವೇಳೆಗೆ ಅಸ್ವಸ್ಥರಾಗಿದ್ದರು. ನಂತರ ತಮ್ಮ ರೂಂಗೆ ತೆರಳಿ ವಿಶ್ರಾಂತಿ ಪಡೆಯುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಬಳಿಕ ಔಷಧಿ ಖರೀದಿಸಲು ಸ್ಥಳೀಯ ಮೆಡಿಕಲ್‌ಗೆ ತೆರಳಿದ ವೇಳೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಜು ಅವರು 10 ವರ್ಷಗಳ ಕಾಲ ಕೆ.ಆರ್. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. 2024ರಲ್ಲಿ ಅವರು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಅಂದಿನಿಂದ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು.







