Breaking
12 Mar 2026, Thu

ಕುಂಪನಮಜಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ

ಬಂಟ್ವಾಳ: ಫರಂಗಿಪೇಟೆಯ ಬಳಿಯ ಕುಂಪನಮಜಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ಕ್ಷೇತ್ರದ ಜೀಣೋದ್ಧಾರದ ಪ್ರಯುಕ್ತ ಮಾ.11ರಂದು ಭೂಮಿ ಪೂಜೆ ನಡೆಯಿತು.

ವಾಸ್ತುಶಿಲ್ಪಿ ರಮೇಶ್ ಕಾರಂತ ಅವರ ನೇತೃತ್ವದಲ್ಲಿ, ಸುಜೀರು ಗಣೇಶ್ ಭಟ್ ಅವರ ಪೌರೋಹಿತ್ಯದಲ್ಲಿ, ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಸದಾನಂದ ಆಳ್ವ ಕಂಪ, ಶ್ರೀಮಂತ ರಾಜಗುಳಿಗ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ, ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷ ರಜತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಮಾರ್ ಮಲೆಮಾರ್, ಧರ್ಮದರ್ಶಿ ಸುನೀಲ್ ಕುಮಾರ್, ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು, ಜೀರ್ಣೊದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಪಣಮಜಲು ಕುಚ್ಚೂರು ಸ್ಥಳದಲ್ಲಿ ಅನಾದಿಕಾಲದಿಂದಲೂ ಋಷಿಮುನಿಗಳು ದೇವಿಶಕ್ತಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ನಂತರದ ಯುಗದಲ್ಲಿ ವಾಸವಾಗಿದ್ದ ಆದಿವಾಸಿ ಕಾಡ ಜನಾಂಗದವರು ಶಕ್ತಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಗಿರಿಜಾ ಎಂಬವರು ತಮ್ಮ ಮನೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರನ್ನು ಆರಾಧಿಸಿಕೊಂಡು ಬಂದು ನಂತರ ಅವರ ಎರಡನೇ ಪುತ್ರ ಈಗಿನ ಧರ್ಮದರ್ಶಿಯಾಗಿರುವ ಸುನೀಲ್ ಕುಮಾರ್ ಆರಾಧನೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಅಮ್ಮನವರ ಸಹಿತ ಶ್ರೀ ಮಹಾಗಣಪತಿ, ಶ್ರೀ ಬಂಗಾರ ಮಂತ್ರದೇವತೆ, ಶ್ರೀ ಚಾಮುಂಡೇಶ್ವರೀ, ಶ್ರೀ ಮಹಾಕಾಳಿ, ಶ್ರೀ ರಕ್ತೇಶ್ವರೀ, ಶ್ರೀ ಮಾರಿಯಮ್ಮ, ಶ್ರೀ ನಾಗದೇವರು, ಶ್ರೀ ಶನೈಶ್ಚರ, ಶ್ರೀ ಕಾಳಭೈರವ, ಸ್ವಾಮಿ ಕೊರಗ ತನಿಯ, ರಾಹುಗುಳಿಗ, ಕಲ್ಲುರ್ಟಿ- ಪಂಜುಲಿ ಮೊದಲಾದ ಸಪರಿವಾರ ಶಕ್ತಿಗಳು ಹಾಗೂ ಗುರು ಸಾನಿಧ್ಯವೂ ಕಂಡು ಬಂದಿದೆ.

ಕ್ರಮೇಣ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಾಗ ಶ್ರೀ ದುರ್ಗಾಪರಮೇಶ್ವರೀ ವಾರಾಹಿ ಸೇವಾ ಸಮಿತಿಯನ್ನು ರಚನೆ ಮಾಡಿ ಸಮಿತಿಯ ಮುಂದಾಳತ್ವದಲ್ಲಿ ನಿತ್ಯ ತ್ರಿಕಾಲ ಪೂಜೆ, ಸಂಕ್ರಮಣ ಸೇವೆ, ದುರ್ಗಾ ನಮಸ್ಕಾರ ಪೂಜೆ, ಶ್ರೀ ಬಂಗಾರ ಮಂತ್ರದೇವತೆ ಹಾಗೂ ಸ್ವಾಮಿ ಕೊರಗ ತನಿಯ ದೈವಗಳಿಗೆ ನರ್ತನ ಸೇವೆಗಳು ನಡೆದುಕೊಂಡು ಬಂದಿದೆ.


ಪ್ರಸ್ತುತ ಅಮ್ಮನವರ ನುಡಿಯಂತೆ, ಭಕ್ತರ ಅಪೇಕ್ಷೆಯಂತೆ ಜೀರ್ಣೋದ್ಧಾರ ಸಮಿತಿ ರಚಿಸಿ ಕ್ಷೇತ್ರದ ಜೀಣೋದ್ಧಾರಕ್ಕೆ ಮುಂದಡಿಯಿಟ್ಟಿದ್ದು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು ಯೋಜನೆ ರೂಪಿಸಲಾಗಿದೆ.

Leave a Reply

Your email address will not be published. Required fields are marked *