ಕಡಬ: ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃವಾಡಿಯಲ್ಲಿ ತೋಟಕ್ಕೆ ಮೇಯಲು ಬಂದ ಜಾನುವಾರಗಳನ್ನು ಓಡಿಸಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಕೊಣಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ (64) ಎಂದು ಗುರುತಿಸಲಾಗಿದೆ.
ಮಗನೊಂದಿಗೆ ವಾಸವಿದ್ದ ಮೃತ ಲೀಲಾವತಿ ಅವರು ತೋಟಕ್ಕೆ ಬಂದ ಜಾನುವಾರಗಳನ್ನು ಓಡಿಸಲು ಹೋದಾಗ ಈ ಘಟನೆ ನಡೆದಿದೆ.

ಲೀಲಾವತಿ ಅವರ ಮಗ ಹರೀಶ್ ಲಾರಿ ಚಾಲಕರಾಗಿದ್ದು, ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆದಿದ್ದು ತಾಯಿ ಮನೆಯಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಹರೀಶ್ ಅವರು ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದರು. ಈ ವೇಳೆ ಲೀಲಾವತಿ ಅವರು ತೋಟದಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಿದ್ದ ರಭಸಕ್ಕೆ ಕೈಯಲ್ಲಿದ್ದ ಕಲ್ಲು ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.







