ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಬಾವಿ ತೋಡುವ ವೇಳೆ ಸ್ಪೋಟಕಗಳನ್ನು ಬಳಸಿದ ಪರಿಣಾಮ ಸ್ಥಳೀಯ ಮನೆಗಳಿಗೆ ಹಾನಿಯಾದ ಘಟನೆ ಮಾ. 8 ರಂದು ನಡೆದಿದೆ.

ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ್ ಅವರು ಅಡಿಕೆ ಮರಗಳಿರುವ 23 ಸೆಂಟ್ಸ್ ಜಮೀನನ್ನು ಖರೀದಿಸಿದ್ದರು. ಈ ಜಮೀನಿನಲ್ಲಿ ನೀರಿಗಾಗಿ ಬಾವಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಸುಮಾರು 15 ಅಡಿ ಆಳದಲ್ಲಿ ಬಂಡೆ ಕಲ್ಲು ಸಿಕ್ಕಿದ ಕಾರಣ, ಅದನ್ನು ಒಡೆಯಲು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟಕಗಳನ್ನು ಸಿಡಿಸಿದ ರಭಸಕ್ಕೆ ಸಮೀಪದ ನಿವಾಸಿಗಳಾದ ವಾಮನ ಮೂಲ್ಯ ಮತ್ತು ಕೆ.ಟಿ. ಮೋಹನ್ ಎಂಬುವವರ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಘಟನೆಯಿಂದ ಆತಂಕಕ್ಕೊಳಗಾದ ನಿವಾಸಿಗಳು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಕಡಬ ಪೊಲೀಸರು ಸ್ಥಳವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






