ಪುತ್ತೂರು: ತಾಲೂಕು ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ.), ಸಿಟಿಗುಡ್ಡೆ, ನೆಹರು ನಗರ, ಪುತ್ತೂರು ಇದರ 69ನೇ ಸಹಾಯ ಯೋಜನೆಯ ಅಂಗವಾಗಿ ಜನವರಿ ತಿಂಗಳ ಸಹಾಯಧನವನ್ನು ಪುತ್ತೂರು ನರಿಮೊಗರು ನಿವಾಸಿಗಳಾದ ಗಾಯತ್ರಿ ಹಾಗೂ ಗಣೇಶ್ ದಂಪತಿಗಳಿಗೆ ಜನಿಸಿದ 14 ದಿನದ ಹೆಣ್ಣುಮಗುವಿನ ಚಿಕಿತ್ಸೆಗೆ ಫೆ. 15 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

ಹೆಣ್ಣುಮಗು ಅಸ್ಪಿರೇಷನ್ ನ್ಯುಮೋನಿಯಾ ಹಾಗೂ ಸೆಕೆಂಡರಿ PPHN (Persistent Pulmonary Hypertension of Newborn) ಕಾರಣದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಪ್ರಸ್ತುತ PC-AC ಮೋಡ್‌ನಲ್ಲಿ ವೆಂಟಿಲೇಷನ್‌ನಲ್ಲಿ ಇರಿಸಲಾಗಿದೆ. ಇದಲ್ಲದೆ obstructive mixed TAPVC ಇರುವುದೂ ಪತ್ತೆಯಾಗಿದ್ದು, ಮುಂದಿನ ಚಿಕಿತ್ಸೆಗೆ ಮಗುವನ್ನು ಬೆಂಗಳೂರಿನ Narayana Health ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ CT ಪಲ್ಮನರಿ ಅಂಜಿಯೋಗ್ರಾಫಿ ಪರೀಕ್ಷೆ ನಡೆಸಲಾಗಿದೆ.

ಮಗುವಿನ ತಂದೆ ಗಣೇಶ್ ರಿಕ್ಷಾ ಚಾಲಕರಾಗಿದ್ದು, ಚಿಕಿತ್ಸೆಯ ಹೆಚ್ಚಿನ ವೆಚ್ಚವನ್ನು ಭರಿಸಲು ಅಸಮರ್ಥರಾಗಿದ್ದರಿಂದ ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದರು. ಮಾನವೀಯ ಸಹೃದಯಿ ದಾನಿಗಳಿಂದ ಸಂಗ್ರಹಿಸಲಾದ ರೂ. 30,200 (ಮೂವತ್ತು ಸಾವಿರದ ಎರಡು ನೂರು ರೂ.)ಗಳನ್ನು ಫೆ. 15ರಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸಮಾಜಸೇವಕರಾದ ಪಂಜಿಗುಡ್ಡೆ ಈಶ್ವರ ಭಟ್ ಅವರ ಮೂಲಕ ಮಗುವಿನ ಪೋಷಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ದೇವಸ್ಥಾನದ ಪ್ರಧಾನ ಅರ್ಚಕರಾದ ವಸಂತ ಕೆದಿಲಾಯ, ಸಾಹಿತಿ ಶಿಕ್ಷಕಿ ಡಾ. ಶಾಂತಾ ಪುತ್ತೂರು ಮತ್ತು ಸಮಾಜಸೇವಕಿ ದೀಕ್ಷಾ ಮೇಡಂ ಮಂಗಳೂರು ಉಪಸ್ಥಿತರಿದ್ದರು.





