ಸುರತ್ಕಲ್: ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ಘಟನೆ ಸುರತ್ಕಲ್ ಸಮೀಪದ ಸೂರಿಂಜೆದಲ್ಲಿ ಬುಧವಾರ (ಆ.5) ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಸೂರಿಂಜೆ ನಿವಾಸಿ ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಎಂದು ಗುರುತಿಸಲಾಗಿದೆ. ಲಿಖಿತ್ ಸೂರಿಂಜೆ ಕೋಟೆ ಬೋಳ್ಳಾರು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಬುಧವಾರ ಸಂಜೆ ಸೂರಿಂಜೆ ಮೈದಾನದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ವೇಳೆ ಲಿಖಿತ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರು ಮತ್ತು ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯು ಕುಟುಂಬಸ್ಥರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ. ಬಾಲಕ ಕುಸಿದು ಬೀಳಲು ನಿಖರ ಕಾರಣ ಏನು ಎಂಬುದು ವೈದ್ಯಕೀಯ ವರದಿಯ ಬಳಿಕವೇ ಸ್ಪಷ್ಟವಾಗುವ ಸಾಧ್ಯತೆಯಿದೆ.



