ಪುತ್ತೂರು: ಆನ್ ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ.

ಪುತ್ತೂರಿನ ನಿವಾಸಿ ಯಶೋಧರ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ಕರೆ ಮಾಡಿ ತಾನು ವಿಮಾ ಕಂಪೆನಿಯಲ್ಲಿ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಹೊಸ ವಿಮಾ ಪಾಲಿಸಿ ಖರೀದಿಸಲು ಮತ್ತು ಪ್ರೀಮಿಯಂ ಪಾವತಿಸಲು ಒತ್ತಾಯಿಸುತ್ತಿದ್ದನು. ಇದನ್ನು ತಿರಸ್ಕರಿಸಿದಾಗ ಚಾಲ್ತಿಯಲ್ಲಿರುವ ವಿಮಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಹಾಯ ಮಾಡುವುದಾಗಿ ನಂಬಿಸಿದ್ದಾನೆ.

ಇದರಿಂದ ಮೋಸಗೊಂಡ ಯಶೋಧರ ಅವರಿಂದ ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಒಟಿಪಿ ಪಡೆದುಕೊಂಡಿದ್ದ. ಈ ಮಾಹಿತಿಯನ್ನು ಬಳಸಿಕೊಂಡು ಆರೋಪಿಯು ದೂರುದಾರರ ಕ್ರೆಡಿಟ್ ಕಾರ್ಡ್‌ನಿಂದ 2,37,036 ರೂಪಾಯಿಗಳನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಯಶೋಧರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಫೆಬ್ರವರಿ 11 ರಂದು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.






