ನವದೆಹಲಿ: 2ನೇ ಹಂತದಲ್ಲಿ ಭಾರತ್ ಅಕ್ಕಿ ಮತ್ತು ಗೋಧಿಯ ಚಿಲ್ಲರೆ ಮಾರಾಟದ ಸಂಚಾರಿ ವಾಹನಗಳಿಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಲ್ಹಾದ ಜೋಶಿ ಹಾಗೂ ರಾಜ್ಯ ಸಚಿವ ಬಿ.ಎಲ್. ವರ್ಮಾ ನವದೆಹಲಿಯಲ್ಲಿಂದು ಚಾಲನೆ ನೀಡಿದರು.
ಈ ಕಾರ್ಯಕ್ರಮದಡಿ ಪ್ರತಿ ಕೆಜಿ ಭಾರತ್ ಅಕ್ಕಿಯ ಗರಿಷ್ಠ ಮಾರಾಟ ಬೆಲೆ ರೂ. 34 ಹಾಗೂ ಭಾರತ್ ಅಟ್ಟಾ ಬೆಲೆ ರೂ. 30 ಆಗಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಪ್ರಲ್ಹಾದ ಜೋಶಿ, ಇದು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳ ಲಭ್ಯತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬದ್ಧತೆಯ ದೃಢೀಕರಣವಾಗಿದೆ ಎಂದು ಹೇಳಿದರು.
ಭಾರತ್ ಬ್ರಾಂಡ್ ಅಡಿಯಲ್ಲಿ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಗಳಂತಹ ಮೂಲ ಆಹಾರ ಪದಾರ್ಥಗಳ ಚಿಲ್ಲರೆ ಮಾರಾಟದ ಮೂಲಕ ನೇರ ಮಧ್ಯಸ್ಥಿಕೆ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ತಿಳಿಸಿದರು.
ಹಂತ – II ರ ಪ್ರಾರಂಭಿಕ ಹಂತದಲ್ಲಿ 3.69 ಎಲ್.ಎಂ.ಟಿ ಗೋಧಿ ಮತ್ತು 2.91 ಎಲ್.ಎಂ.ಟಿ ಅಕ್ಕಿಯನ್ನು ಚಿಲ್ಲರೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಹಂತ – I ರಲ್ಲಿ ಸುಮಾರು 15.20 ಎಲ್.ಎಂ.ಟಿ ಭಾರತ್ ಗೋಧಿ ಹಿಟ್ಟು ಮತ್ತು 14.58 ಎಲ್.ಎಂ.ಟಿ ಭಾರತ್ ಅಕ್ಕಿಯನ್ನು ಸಾಮಾನ್ಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು.
ಹಂತ-II ರಲ್ಲಿ ಎನ್.ಸಿ.ಸಿ.ಎಫ್., ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮತ್ತು ಇ-ಕಾಮರ್ಸ್ ರಿಟೇಲರ್ ಅಂಗಡಿಗಳು ಮತ್ತು ಸಂಚಾರಿ ವಾಹನಗಳಲ್ಲಿ ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಮತ್ತು ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತದೆ. ಗೋಧಿ ಹಿಟ್ಟು ಹಾಗೂ ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ.