ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಇದರ ಮಂಚಿ ಕುಕ್ಕಾಜೆ ಎರಡನೇ ಶಾಖೆಯ ಉದ್ಘಾಟನೆ ಕುಕ್ಕಾಜೆ ಜಂಕ್ಷನ್‌ನ ಬ್ಲಿಸ್ ಪುಲ್ ಆರ್ಕೆಡ್ ಪ್ರಥಮ ಮಹಡಿಯಲ್ಲಿ ಭಾನುವಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಸಂಘಟನೆಯ ಮೂಲಕ ಬಲಿಷ್ಠ ಶಕ್ತಿಯನ್ನು ಪಡೆಯಬಹುದು. ಸಂಸ್ಥೆಯ ಆಂತರಿಕ ಉತ್ತಮ ರೀತಿಯ ವ್ಯವಹಾರ ನಿರ್ವಹಣೆ ಉತ್ತಮವಾಗಿದ್ದಾಗ ಸಂಸ್ಥೆ ಉತ್ತುಂಗಕ್ಕೇರುತ್ತದೆ.
ಬಡವರಿಗೆ ಸಹಕಾರ ಮಾಡುವುದಕ್ಕೆ ಸಂಘಗಳು ಸಹಕಾರಿಯಾಗಿದೆ. ಸಮಾಜಮುಖಿಯಾದ ಕಾರ್ಯಕ್ರಮಗಳ ಮೂಲಕ ವಿಶೇಷ ಕೊಡುಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗಣಕ ಯಂತ್ರವನ್ನು ಉದ್ಘಾಟಿಸಿದ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಮಾತನಾಡಿ ಭಾರತದ ಕುಟುಂಬ ಪದ್ಧತಿಯೇ ಸಹಕಾರಿ ಸಂಘಗಳ ಮೂಲ. ಸಹಕಾರಿ ಸಂಘಗಳು ಅವಕಾಶಗಳ ಆಗರ. ದೇಶದ ಕ್ಷಿಪ್ರ ಪ್ರಗತಿಗೆ ಸಹಕಾರಿ ಕ್ಷೇತ್ರ ಪೂರಕವಾಗಿದೆ. ದೇಶದ ಸಂಸ್ಕೃತಿ, ಸಂಸ್ಕಾರ ತತ್ವಗಳು ಪ್ರತೀ ವ್ಯವಸ್ಥೆಯಲ್ಲಿ ಬರಬೇಕು. ಜಗತ್ತು ಬಲಿಷ್ಠವಾಗಬೇಕಾದರೆ ಭಾರತ ಉಳಿಯಬೇಕು ಎಂದರು.
ಭದ್ರತಾಕೋಶವನ್ನು ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್. ವಹಿಸಿದ್ದರು.
ಮಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಎಂ. ಇಬ್ರಾಹಿಂ, ಮಂಚಿ ಹಿರಿಯ ವೈದ್ಯ ಲ.ಡಾ. ಗೋಪಾಲ ಆಚಾರ್, ಮಹಾದೇವ ದೇವಸ್ಥಾನದ ಮೊಕ್ತೇಸರ ಗಣೇಶ್ ಐತಾಳ್, ಕಟ್ಟಡ ಮಾಲೀಕ ಜೆಫ್ರಿ ಲೂವಿಸ್, ಜ್ಯೋತಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ರವಿ ಟಿ. ಪೂಜಾರಿ, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಪಟ್ಲ ಉಪಸ್ಥಿತರಿದ್ದರು.
ಸೌಮ್ಯ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಬು ಕೆ. ವಿ. ಸ್ವಾಗತಿಸಿದರು. ನಿರ್ದೇಶಕ ಡಾ. ಗೀತಪ್ರಕಾಶ್ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.