Breaking
23 Dec 2024, Mon

ಡಿ.29ರಂದು ವಿಟ್ಲದಲ್ಲಿ ಬಂಟ್ವಾಳ ತಾಲೂಕು ಆರನೇ ‌ಚುಟುಕು ಸಾಹಿತ್ಯ ಸಮ್ಮೇಳನ

ವಿಟ್ಲ : ಬಂಟ್ವಾಳ ತಾಲೂಕು ‌ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ತಾಲೂಕು ಮಟ್ಟದ ಆರನೇ ಚುಟುಕು ಸಾಹಿತ್ಯ ಸಮ್ಮೇಳನ ಮುಳಿಯ ಶಂಕರಭಟ್ ಅವರ ಅಧ್ಯಕ್ಷತೆಯಲ್ಲಿ ಡಿ.29 ರಂದು ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ‌ ನಡೆಯಲಿದೆ ಎಂದು ಸ್ವಾಗತ ಸಮಿತಿ ಕಾರ್ಯದರ್ಶಿ ರಾಜಾರಾಮ ವರ್ಮ ತಿಳಿಸಿದರು.

‌ಅವರು ಗುರುವಾರ ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು. ಪಲಿಮಾರು ಶ್ರೀ ಜನಾರ್ದನ ಪೈ ಸಭಾಂಗಣದ ರವಿವರ್ಮ ಕೃಷ್ಣರಾಜ ಅರಸು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿಯ ಪ್ರಧಾನ ಸಂಚಾಲಕ ಎಂ. ಜಿ. ಆರ್. ಅರಸು ಅವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಿದ್ದಾರೆ ಎಂದರು‌.

ಉದ್ಘಾಟನೆಗೆ ಮೊದಲು ನಡೆಯುವ ಮೆರವಣಿಗೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಉದ್ಘಾಟಿಸಲಿದ್ದಾರೆ. ಕನ್ನಡ ಧ್ವಜಾರೋಹಣವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ನೆರವೇರಿಸುವರು. ವಿಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾನೂನು ಅಧಿಕಾರಿ ವಿಟ್ಲ ಅರಮನೆ ನರಸಿಂಹ ವರ್ಮ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸಮ್ಮೇಳನದಲ್ಲಿ ಕೃತಿ ಬಿಡುಗಡೆ, ಮಕ್ಕಳ ಚುಟುಕುಗೋಷ್ಠಿ ಹಿರಿಯರ ಚುಟುಕು ಗೋಷ್ಠಿ, ವಿಚಾರಗೋಷ್ಠಿ, ಅಭಿನಂದನೆ, ಸಾಧಕರಿಗೆ ಸನ್ಮಾನ, ಯಕ್ಷಗಾನ ತಾಳಮದ್ದಳೆ ಹಾಗೂ ಸಾಂಸ್ಕೃತಿಕ ವೈವಿಧ್ಯಗಳನ್ನು ಆಯೋಜಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕೋಶಾಧಿಕಾರಿ ಮೋಹನ ಗುರ್ಜಿನಡ್ಕ, ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಉಪಾಧ್ಯಕ್ಷ ವಿಷ್ಣುಗುಪ್ತ ಪುಣಚ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *