ಬಿ..ಸಿ.ರೋಡ್ : ತುಕ್ಕು ಹಿಡಿದು ಮಣ್ಣಾಗುತ್ತಿರುವ ಕಬ್ಬಿಣದ ಸರಳುಗಳು, ಗಾಳಿಗೆ ಹಾರಿ ಹೋಗಿರುವ ಚಾವಣಿ ಶೀಟುಗಳು. ಮಕ್ಕಳು ಕೆಳಗೆ ಬೀಳದಂತೆ ಭದ್ರತೆಗಾಗಿ ಹಾಕಿರುವ ಕಬ್ಬಿಣದ ಶೀಟುಗಳು ಮಾಯವಾಗಿರುವುದು, ಹೀಗೆ ಸಾಲು ಸಾಲಾಗಿ ಗಂಡಾಂತರ ಕಣ್ಣೆದುರಿಗೆ ಕಾಣುತ್ತಿದ್ದರೂ, ಅನಿವಾರ್ಯವಾಗಿ ತುಕ್ಕು ಹಿಡಿದಿರುವ ಕಬ್ಬಿಣದ ಓವರ್ ಬ್ರಿಡ್ಜ್‌ನಲ್ಲಿ ನಿತ್ಯ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಓದುತ್ತಿರುವ ನೂರಾರು ಮಕ್ಕಳು ಸಂಚರಿಸುವುದು ಅನಿವಾರ್ಯವಾಗಿದೆ.
ಇದು ಮಂಗಳೂರು-ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ೭೫ರ ತುಂಬೆಯಲ್ಲಿ ನಿರ್ಮಿಸಿರುವ ಓವರ್ ಬ್ರಿಡ್ಜ್‌ನ ಕಥೆ.ಮಂಗಳೂರು – ಬೆಂಗಳೂರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ರಸ್ತೆ ತುಂಬೆಯಲ್ಲಿ ಹಾದು ಹೋಗಿದ್ದು, ಏಕಮುಖ ಸಂಚಾರ ಹೊಂದಿರುವ ಕಾರಣ ವಾಹನಗಳು ಈ ರಸ್ತೆಯಲ್ಲಿ ಅತಿವೇಗವಾಗಿ ಬರುತ್ತವೆ ಮತ್ತು ಈ ರಸ್ತೆಯಲ್ಲಿ ಅಪಾಯಕಾರಿಯಾದ ತಿರುವು ಕೂಡ ಇದೆ. ಹೀಗಾಗಿ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರು ರಸ್ತೆ ದಾಟುವಾಗ ಅಪಾಯ ಎದುರಾಗುತ್ತದೆ ಎಂಬ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ೨೦೧೩ರಲ್ಲಿ ಸುಮಾರು ೩೬ ಲಕ್ಷ ರೂಪಾಯಿ ವೆಚ್ಚದಲ್ಲಿ ಗಟ್ಟಿಮುಟ್ಟಾದ ಕಬ್ಬಿಣದಿಂದ ತಯಾರಿಸಿದ ಪಾದಾಚಾರಿ ಮೇಲ್ಸೇತುವೆಯನ್ನು ನಿರ್ಮಿಸಿತ್ತು. ಈ ಪಾದಚಾರಿ ಮೇಲ್ಸೇತುವೆಯು ತುಂಬೆ ಬಿ.ಎ. ವಿದ್ಯಾ ಸಂಸ್ಥೆಯ ಬಳಿಯಲ್ಲೇ ನಿರ್ಮಿಸಿರುವುದರಿಂದ ಇಲ್ಲಿರುವ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಉಪಯೋಗಿಸುತ್ತಿದ್ದು, ಹಿಂದೆ ಗಟ್ಟಿಮುಟ್ಟಾದ ಕಬ್ಬಿಣದಿಂದ ತಯಾರಿಸಿದ ಓವರ್ ಬ್ರಿಡ್ಜ್, ಈಗ ನಿರ್ವಹಣೆ ಸರಿಯಾಗಿ ಮಾಡದಿರುವ ಕಾರಣ ತುಕ್ಕು ಹಿಡಿದು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿ ನಿರ್ಮಿಸಿದ ಈ ಓವರ್ ಬ್ರಿಡ್ಜ್ ಬಳಸಿ ದಾಟಲು ಹಲವು ನಿಮಿಷಗಳೇ ಬೇಕಾಗಿದೆ. ಆದರೂ ಅಪಘಾತ-ಅನಾಹುತಗಳನ್ನು ತಪ್ಪಿಸುವ ದೃಷ್ಟಿಯಿಂದ ಈ ಪಾದಾಚಾರಿ ಮೇಲ್ಸೇತುವೆಯನ್ನು ಬಳಸಿಕೊಳ್ಳುವ ನಿರ್ಧಾರವನ್ನು ಮಾಡಿದರೆ ಸರಿಯಾದ ನಿರ್ವಹಣೆ ಇಲ್ಲದೆ ಜನ ಇದರ ಹತ್ತಿರ ಸುಳಿಯಲೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.
ಮೇಲ್ಸೇತುವೆಯ ಬಳಿಯಲ್ಲೇ ಇದೆ ಅಪಾಯಕಾರಿ ಹೊಂಡ : ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲೇ ಅಪಾಯಕಾರಿಯಿ ಹೊಂಡ ಇದೆ. ಹೊಂಡ ಇರುವುದನ್ನು ಕೇವಲ ನಾಲ್ಕು ಕಂಬ ಹಾಕಿ ಪ್ಲಾಸ್ಟಿಕ್ ಬಳಸಿ ಗುರುತು ಮಾಡಲಾಗಿದೆ. ಆದರೆ ಅಪ್ಪಿತಪ್ಪಿ ಯಾರಾದರೂ ಮುಂದೆ ಹೋದರೆ ಹೆದ್ದಾರಿ ಬದಿಯಲ್ಲಿರುವ ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಬೆಳಿಗ್ಗೆ ಮತ್ತು ಸಂಜೆ ಶಾಲೆ ಬಿಡುವ ಸಮಯದಲ್ಲಿ ಶಾಲಾ ಮಕ್ಕಳ ಸಂಚಾರಿಸಲು ತುಂಬಾ ಸಮಸ್ಯೆಯಾಗಿದೆ. ಒಂದು ಕಡೆ ವೇಗವಾಗಿ ಬರುತ್ತಿರುವ ವಾಹನಗಳು ಹಾಗೂ ಹತ್ತಿರದಲ್ಲೇ ಇರುವ ಹೊಂಡ ಇರುವುದರಿಂದ ಈ ಭಾಗದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಇಲ್ಲಿ ತಡೆಗೋಡೆ ಅತೀ ಶೀಘ್ರದಲ್ಲಿ ಆಗಬೇಕಾಗಿದೆ.ಓವರ್ ಬ್ರಿಡ್ಜ್ ನಿರ್ಮಾಣದ ಸಮಯದಲ್ಲಿ ಮಾತ್ರ ಬಣ್ಣ ಬಳಿದಿದ್ದು, ಈಗ ತುಕ್ಕು ಹಿಡಿದಿರುವ ಕಬ್ಬಿಣ ಪೂರ್ತಿ ಬ್ರಿಡ್ಜ್‌ನ ಸೌಂದರ್ಯವನ್ನೂ ಹಾಳುಗೆಡವಿದೆ. ಈ ಓವರ್ ಬ್ರಿಡ್ಜ್‌ಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಯೊಬ್ಬ ವಾಹನ ಸವಾರರೂ ಹೆದ್ದಾರಿ ಸುಂಕ ನೀಡುತ್ತಾ ಇದ್ದರೂ ಸರಿಯಾದ ನಿರ್ವಹಣೆ ಮಾಡದೇ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದಷ್ಟು ಬೇಗ ಸಾರ್ವಜನಿಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎನ್ನುವುದೇ ಸಾರ್ವಜನಿಕರ ಅಹವಾಲು.
“ತುಂಬೆ ಓವರ್ ಬ್ರಿಡ್ಜ್ ಸಂಪೂರ್ಣ ಹದಗೆಟ್ಟಿದೆ. ಇದರ ಸ್ಥಿತಿ ಹೇಗಿದೆ ಎಂದು. ಹೆದ್ದಾರಿಯಲ್ಲಿ ಸಂಚರಿಸುವಾಗಲೇ ಗೋಚರವಾಗುತ್ತದೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವ ಜನಪ್ರತಿನಿಧಿಗಳುಗೆ ಹಾಗೂ ಅಧಿಕಾರಿ ವರ್ಗದವರಿಗೆ ಇದರ ಗೊಡವೆಯೇ ಇರುವುದಿಲ್ಲ. ಉದ್ಘಾಟನೆಯಾದ ನಂತರ ಇದರ ನಿರ್ವಹಣೆಯ ಬಗ್ಗೆ ಯಾರೂ ಮುಂದೆ ಬರಲಿಲ್ಲ. ಕಬ್ಬಣ ತುಂಡುಗಳು ತುಕ್ಕು ಹಿಡಿದು ರಸ್ತೆಯಲ್ಲಿ ಬೀಳುತ್ತಿದೆ. ಇದರಿಂದ ಸಣ್ಣ ಪುಟ್ಟ ಘಟನೆಗಳಾಗಿದೆ. ಮುಂದೆ ದೊಡ್ಡ ಘಟನೆಯಾಗದಂತೆ ಮುತುವರ್ಜಿ ವಹಿಸಿ ಆದಷ್ಟು ಬೇಗ ಇದರ ಬಗ್ಗೆ ಗಮನಕೊಡವುದು ಒಳ್ಳೆಯದು.- ಪ್ರವೀಣ್ ಬಿ. ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯರು, ಮಕ್ಕಳ ಸುರಕ್ಷತೆಗಾಗಿ ಹೆದ್ದಾರಿ ಪ್ರಾಧಿಕಾರ ಓವರ್ ಬ್ರಿಡ್ಜ್ ನಿರ್ಮಿಸಿರುವುದು ನಿಜಕ್ಕೂ ಉತ್ತಮ ವಿಷಯ. ಅದರೆ ಅದರ ನಿರ್ವಹಣೆಯೂ ಅವರ ಜವಾಬ್ದಾರಿಯಾಗಿರುತ್ತದೆ. ಸ್ಥಳೀಯ ಪಂಚಾಯತ್‌ಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕ್ಕೂ ದುರಾವಸ್ಥೆಂiiಲ್ಲಿರುವ ಓವರ್ ಬ್ರಿಡ್ಜ್‌ನನ್ನು ಸರಿ ಮಾಡಲು ಮನವಿಯನ್ನು ಮಾಡಿದ್ದೇವೆ. ಸರಕಾರ ಒದಗಿಸುವ ಯಾವುದೇ ಯೋಜನೆಗಳಾದರೂ ಸರಿಯಾದ ನಿರ್ವಹಣೆ ಇದ್ದರೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು”.- ವಿ. ಸುಬ್ರಹ್ಮಣ್ಯ ಭಟ್, ಪ್ರಾಂಶುಪಾಲರು, ತುಂಬೆ ಪದವಿ ಪೂರ್ವ ಕಾಲೇಜು
ವರದಿ : ಯಾದವ ಕುಲಾಲ್ ಅಗ್ರಬೈಲು