ಬಂಟ್ವಾಳ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ, ಖ್ಯಾತ ಭಾಗವತರಾದ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ,ಭರತನಾಟ್ಯ, ಯಕ್ಷಗಾನದಂತಹ ಕಲೆಯಲ್ಲಿ ಮಕ್ಕಳನ್ನು ಜೋಡಿಸಿದರೆ ಅವರು ಸುಸಂಸ್ಕೃತರಾಗುತ್ತಾರೆ. ಯಕ್ಷಗಾನದಿಂದ ದೈಹಿಕ ವ್ಯಾಯಾಮ, ಆತ್ಮಸ್ಥೈರ್ಯ, ಸಂಸ್ಕಾರ ಪಡೆಯುತ್ತಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯಲ್ಲಿ ರಾಜ್ಯಾದ್ಯಂತ ಈ ವರ್ಷ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹಾಗೂ ಭರತ್ ಶೆಟ್ಟಿ ಅವರ ಸಹಕಾರದಲ್ಲಿ ಡಿ.31ರಂದು ಒಡ್ಡೂರು ಫಾರ್ಮ್‌ನಲ್ಲಿ ಸರಕಾರಿ ಶಾಲಾ ಮಕ್ಕಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಮುಖ್ ಸಂದೇಶ್ ಶೆಟ್ಟಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಬಿ.ರಾಜಶೇಖರ ಶೆಟ್ಟಿ, ಮಂಗಳೂರು ಹಾಪ್ ಕಾಮ್ಸ್ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ, ಮಡಂತ್ಯಾರು ಚಾರ್ಟರ್ಡ್ ಆಕೌಂಟೆಂಟ್ ಹರ್ಷನಾರಾಯಣ ಶೆಟ್ಟಿ,ಪುಂಜಾಲಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಅನಿಲಡೆ, ಘಟಕ ಗೌರವ ಸಲಹೆಗಾರ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ,ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ, ಅಧ್ಯಕ್ಷೆ ಉಮಾ ಡಿ. ಗೌಡ ವೇದಿಕೆಯಲ್ಲಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಜಿನೇಂದ್ರ ಜೈನ್ ಬಳ್ಳಮಂಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಯಕ್ಷಗಾನ ತಾಳಮದ್ದಳೆ ಸಂಘ, ಪಾರೆಂಕಿ ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸಂಘ ಅವರಿಗೆ ಗೌರವಾರ್ಪಣೆ ನಡೆಯಿತು. ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಘಟಕ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್ ಗುಂಡ್ಯಲ್ಕೆ ವಂದಿಸಿದರು.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಮಧ್ಯಾಹ್ನ ಕಾರ್ಯಕ್ರಮವನ್ನು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಶಾಂತ್ ಪುಂಜಾಲಕಟ್ಟೆ ಅವರು ಉದ್ಘಾಟಿಸಿದರು. ಘಟಕದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.