Breaking
23 Dec 2024, Mon

ಚಲಿಸುತ್ತಿರುವ ಸಾರಿಗೆ ಬಸ್ ಗಳ ಬಾಗಿಲು ಮುಚ್ಚುವುದು ಕಡ್ಡಾಯ| ನ.6ರಿಂದಲೇ ಜಾರಿಗೊಳಿಸಲು ಡಿಸಿ ಮುಲ್ಲೈ ಮುಗಿಲನ್ ಆದೇಶ

ಮಂಗಳೂರು: ಸಿಟಿ ಬಸ್ ಹೊರತುಪಡಿಸಿ ನಗರದಿಂದ ಹೊರಡುವ ಎಲ್ಲ ಸಾರಿಗೆ ಬಸ್‌ಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳ ಬಾಗಿಲು ಮುಚ್ಚುವ ಕ್ರಮವನ್ನು ಬುಧವಾರ(ನ.6) ದಿಂದಲೇ ಜಾರಿಗೊಳಿಸಬೇಕು,ಬಾಗಿಲು ಇಲ್ಲದ ಬಸ್‌ಗಳಿಗೆ ಡಿ.10ರ ಒಳಗಾಗಿ ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ, ಡಿಸಿಪಿ ದಿನೇಶ್ ಕುಮಾರ್ ಈ ವಿಷಯ ಪ್ರಸ್ತಾಪಿಸಿ, ಈ ಹಿಂದೆ ನಡೆದ ಸಭೆಯಲ್ಲಿ ಬಸ್‌ಗಳಿಗೆ ಬಾಗಿಲು ಅಳವಡಿಸುವ ಸಂಬಂಧ ಸೂಚನೆ ನೀಡಲಾಗಿತ್ತು. ಆದರೆ, ಇದು ಪಾಲನೆಯಾಗುತ್ತಿಲ್ಲ ಎಂದರು.‘ಸುಮಾರು 1,500 ಖಾಸಗಿ ಬಸ್‌ಗಳು ಇದ್ದು, ಎಷ್ಟು ಬಸ್‌ಗಳಿಗೆ ಬಾಗಿಲು ಇವೆ, ಎಷ್ಟು ಬಸ್‌ಗಳಲ್ಲಿ ಬಾಗಿಲು ಬಳಕೆಯಾಗುತ್ತಿವೆ’ ಎಂದು ಡಿಸಿ ಪ್ರಶ್ನಿಸಿದರು.ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ನಿರ್ದಿಷ್ಟ ಪಾಯಿಂಟ್‌ಗಳಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಆದರೆ, ಎಲ್ಲ ಕಡೆಗಳಲ್ಲೂ ಬಸ್ ನಿಲ್ಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಆಕ್ಷೇಪಿಸಿದರು.

2017ರ ನಂತರ ಬಂದಿರುವ ಬಸ್‌ಗಳಿಗೆ ಬಾಗಿಲು ಇದ್ದು, ಅದಕ್ಕೂ ಪೂರ್ವದ ಬಸ್‌ಗಳಿಗೆ ಬಾಗಿಲು ಇಲ್ಲ ಎಂದು ಬಸ್‌ ಮಾಲೀಕರೊಬ್ಬರು ಹೇಳಿದರು.ಸಿಟಿ ಬಸ್‌ಗಳಿಗೆ ಹೆಚ್ಚು ನಿಲುಗಡೆ ಇರುವುದರಿಂದ, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಆದರೆ, ಉಳಿದ ಎಲ್ಲ ರೀತಿಯ ಬಸ್‌ಗಳು ಚಾಲನೆಯ ವೇಳೆ ಕಡ್ಡಾಯವಾಗಿ ಬಸ್ ಬಾಗಿಲನ್ನು ಹಾಕಬೇಕು ಎಂದರು.

ಕೆಎಸ್‌ಆರ್‌ಟಿಸಿ ಬಸ್‌ ಬೇಡಿಕೆಗೆ ವಿರೋಧ: ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾರ್ಕಳ- ಮೂಡುಬಿದಿರೆ ಮಾರ್ಗದಲ್ಲಿ ಏಳು ಸಿಂಗಲ್ ಟ್ರಿಪ್‌ನಂತೆ ಎಂಟು ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡುವಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ವಿನಂತಿಸಿತು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಜನರ ಬೇಡಿಕೆಗೆ ಅನುಗುಣವಾಗಿ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಅನುಮತಿ ನೀಡುವಂತೆ ಬೇಡಿಕೆ ಸಲ್ಲಿಸಿದರು. ಮುಡಿಪುದಿಂದ ಸುರತ್ಕಲ್ ಎನ್‌ಐಟಿಕೆ, ತಲಪಾಡಿಯಿಂದ ಬಜಪೆ, ಮೂಡುಶೆಡ್ಡೆಯಿಂದ ಸೋಮೇಶ್ವರ, ಬಜಪೆಯಿಂದ ಉಳ್ಳಾಲ ಕೋಟೆಪುರ ಸೇರಿದಂತೆ ಒಟ್ಟು 15 ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಪಕ್ಕಾ ಪರವಾನಗಿಗೆ ಅನುಮತಿ ನೀಡಬೇಕು. ಈ ಹಿಂದೆ 56 ಸಿಂಗಲ್ ಟ್ರಿಪ್‌ಗಳಿಗೆ ಪರವಾನಗಿ ಕೇಳಲಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ಕಾರಣ ಅನುಮತಿ ದೊರೆತಿಲ್ಲ. ಕೇಂದ್ರ ಸರ್ಕಾರ ಏರಿಯಾ ಸ್ಕೀಂ ನಿಯಮದ ಪ್ರಕಾರ ಹೊಸ ಮಾರ್ಗಕ್ಕೆ ಪರವಾನಗಿ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ ಎಂದರು.

ಖಾಸಗಿ ಬಸ್ ಮಾಲೀಕರ ಸಂಘದ ಪರವಾಗಿ ವಾದ ಮಂಡಿಸಿದ ವಕೀಲರು, ‘ಮಂಗಳೂರು- ಕಾರ್ಕಳ- ಮೂಡುಬಿದಿರೆ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಮೂರೂವರೆ ದಶಕಗಳಿಂದ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಪ್ರಯಾಣಿಕರ ಅನುಕೂಲಕ್ಕೆ ಪ್ರತಿ ಐದು ನಿಮಿಷಕ್ಕೊಂದರಂತೆ ಬಸ್‌ಗಳು ಸಂಚರಿಸುತ್ತವೆ. ಅನಾರೋಗ್ಯಕರ ಪೈಪೋಟಿಯಿಂದ ದಕ್ಷಿಣ ಕನ್ನಡದಲ್ಲಿ ಉತ್ತಮ ಸೇವೆ ನೀಡುತ್ತಿರುವ ಖಾಸಗಿ ಬಸ್‌ ವ್ಯವಸ್ಥೆ ಸಂಕಷ್ಟಕ್ಕೆ ಒಳಗಾಗುತ್ತದೆ’ ಎಂದರು.

ಕೆಎಸ್‌ಆರ್‌ಟಿಸಿ ಸಲ್ಲಿಸಿರುವ ಬೇಡಿಕೆಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಗಡುವು ಕೇಳಿದರು.ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ಸಂಚಾರಕ್ಕೆ ಜಿಲ್ಲಾಧಿಕಾರಿ ನ್ಯಾಯಾಲಯದ ತಡೆಯಾಜ್ಞೆ ಹಾಗೂ ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಹೊಸ ಪರವಾನಗಿ ನೀಡಬಾರದು ಎಂದು ವಕೀಲರು ವಾದಿಸಿದರು.ಖಾಸಗಿ ಬಸ್‌ಗಳ ಸೇವೆ ಬಗ್ಗೆ ಎಲ್ಲಿಯೂ ಜನರಿಂದ ತಕರಾರು ಇಲ್ಲ. ಆದರೆ, ಅತಿವೇಗದ ಚಾಲನೆ ಬಗ್ಗೆ ದೂರು ಇದೆ. ಬಸ್ ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪಲು ನೀಡಿರುವ ಸಮಯ ಸುಮಾರು ಮೂರು ದಶಕಗಳಿಂದ ಪರಿಷ್ಕರಣೆಯಾಗಿಲ್ಲ. ಸಮಯ ಪರಿಷ್ಕರಣೆಯಾದರೆ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಬಸ್‌ ಮಾಲೀಕ ದಿಲ್‌ರಾಜ್ ಆಳ್ವ ಸಲಹೆ ನೀಡಿದರು.

ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಎಸ್ಪಿ ಯತೀಶ್ ಎನ್, ಮಹಾನಗರ ಪಾಲಿಕೆ ಆಯುಕ್ತ ಆನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಇದ್ದರು.ಜಿಲ್ಲಾಧಿಕಾರಿ ಸೂಚನೆಬಸ್‌ಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ ಜಿಪಿಎಸ್‌ ಅಳವಡಿಸಿದ ಬಸ್‌ಗಳು ಸ್ಮಾರ್ಟ್‌ ಸಿಟಿಯ ನಿಯಂತ್ರಣ ಕೊಠಡಿ ಜೊತೆ ಸಂಪರ್ಕ ಸಾಧಿಸಬೇಕು ಕಾಲಕಾಲಕ್ಕೆ ಮಾಹಿತಿ ಒದಗಿಸದಿದ್ದಲ್ಲಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.ಪ್ರೀ ಪೇಯ್ಡ್ ಆಟೊ ಕುರಿತು ಪ್ರತ್ಯೇಕ ಸಭೆ.ನವ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) 400 ಲಾರಿಗಳ ನಿಲುಗಡೆಗೆ ಅವಕಾಶ ಇರುವ ಟ್ರಕ್ ಟರ್ಮಿನಲ್ ನಿರ್ಮಿಸಿದೆ. ಹೆದ್ದಾರಿ ಬದಿಯಲ್ಲಿ ಲಾರಿ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಎನ್‌ಎಂಪಿಎ ಅಧಿಕಾರಿ ಹೇಳಿದರು. ಈ ಬಗ್ಗೆ ಲಾರಿ ಚಾಲಕರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಪೊಲೀಸ್ ಇಲಾಖೆಗೆ ತಿಳಿಸಿದರು.

Leave a Reply

Your email address will not be published. Required fields are marked *