ಮೈಸೂರು: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದೊಂದು ಸುಳ್ಳು ಪ್ರಕರಣವಾಗಿದ್ದು, ವಿಚಾರಣೆಯಿಂದ ನನಗೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಲೋಕಾಯುಕ್ತ ವಿಚಾರಣೆ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ಲೋಕಾಯುಕ್ತ ಅಧಿಕಾರಿಗಳು ನನ್ನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ಮುಂದಿನ ತನಿಖೆ ಮಾಡುತ್ತಾರೆ. ನಾವು ನಿವೇಶನ ವಾಪಸ್ ನೀಡಿರುವುದು ತಪ್ಪು ಮಾಡಿದ್ದೇವೆ ಎಂದಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ಬೇಸರಗೊಂಡು ನನ್ನ ಹೆಂಡತಿ ಆ ತೀರ್ಮಾನ ಕೈಗೊಂಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ನನ್ನ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳು ಇಲ್ಲ. ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಇದೊಂದು ಆರೋಪವಷ್ಟೇ. ಇದು ನನಗೆ ಕಪ್ಪು ಮಸಿ ಅಲ್ಲ’ ಎಂದರು.
ಬಿಜೆಪಿಯಿಂದ ಗೋ ಬ್ಯಾಕ್ ಚಳವಳಿ ಕುರಿತು ಪ್ರತಿಕ್ರಿಯಿಸಿ ‘ ಸ್ನೇಹಿಮಹಿ ಕೃಷ್ಣ ದೂರು ಆಧರಿಸಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಈಗ ಬಿಜೆಪಿಯವರು ಗೋಬ್ಯಾಕ್ ಎಂದು ಘೋಷಣೆ ಕೂಗಿದರೆ ಏನು ಅರ್ಥ? ಹಾಗಿದ್ದರೆ ಬಿಜೆಪಿಯವರು ತನಿಖೆಯ ವಿರುದ್ಧ ಇದ್ದಾರ? ’ ಎಂದು ಪ್ರಶ್ನಿಸಿದರು.ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುವ ಆಗ್ರಹದ ಕುರಿತು ಪ್ರತಿಕ್ರಿಯಿಸಿ ‘ ಸಿಬಿಐ ಯಾರ ಕೈಯಲ್ಲಿ ಇದೆ? ಬಿಜೆಪಿಯವರು ಯಾವ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರಾ? ಲೋಕಾಯುಕ್ತ ಮಾಡಿರುವುದು ಯಾರು’ ಎಂದು ಪ್ರಶ್ನಿಸಿದರು.