ಪುತ್ತೂರು: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶಿರಾಡಿ ಘಾಟಿ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿ ಕೇಂದ್ರ ಹೆದ್ದಾರಿ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಶುಕ್ರವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಿರಾಡಿ ಘಾಟ್ ಸುರಂಗ ಮಾರ್ಗದ ಡಿಪಿಆರ್ ಪೂರ್ಣಗೊಂಡಿಲ್ಲ. ಈ ಮೊದಲು ಒಂದು ಎಲೈನ್‍ಮೆಂಟ್ ಮಾಡಿದ್ದರು. ಅದು ಸರಿಯಾಗಿಲ್ಲ. ಹೊಸ ಎಲೈನ್‍ಮೆಂಟ್ ಮಾಡಬೇಕೆಂಬ ಆಲೋಚನೆ ಅಡಿಯಲ್ಲಿ ಕೆಲಸ ಮಾಡಲಾಗುತ್ತಿದೆ. ರೈಲ್ವೆಯವರು ಕೂಡ ಲೊಕೇಶನ್ ಸರ್ವೆ ಮಾಡುತ್ತಿದ್ದರು. ರೈಲ್ವೆ ಮತ್ತು ಹೆದ್ದಾರಿ ಇಲಾಖೆ ಜತೆಯಾಗಿ ಕುಳಿತು ಮಾತನಾಡಿ ಅಂತಿಮ ವರದಿ ಸಿದ್ಧಪಡಿಸಬೇಕೆಂದು ಮನವಿ ಮಾಡಿದ್ದೇನೆ. ಅಧಿವೇಶನದ ಸಮಯದಲ್ಲಿ ಈ ಬಗ್ಗೆ ಫೋಲೋ ಅಪ್ ಮಾಡುತ್ತೇನೆ ಎಂದವರು ಹೇಳಿದರು.

ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ಭಾಗದಲ್ಲಿ ನಡೆಯುತ್ತಿರುವ ಹಳಿ ವಿದ್ಯುದೀಕರಣ ಕಾಮಗಾರಿ ವೇಳಾಪಟ್ಟಿಯಂತೆ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕ್ಯಾ.ಚೌಟ ಹೇಳಿದರು. ಮಳೆಯ ಕಾರಣದಿಂದಾಗಿ ಒಂದಷ್ಟು ಕಾಮಗಾರಿಯಲ್ಲಿ ವಿಳಂಬವಾಗಿದ್ದರೂ ಒಟ್ಟಾರೆಯಾಗಿ ವೇಳಾಪಟ್ಟಿಯಂತೆ ನಡೆಯುತ್ತಿದೆ ಎಂದರು.

ಮಂಗಳೂರು-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಪದೇ ಪದೇ ವಿಳಂಬವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳಿರುವ ವಿಚಾರದಲ್ಲಿ ಮಾತನಾಡಿದ ಅವರು, ನನಗೂ ದೂರು ಬಂದಿದೆ. ಒಂದು ತಿಂಗಳ ಡಾಟಾ ಪಡೆದುಕೊಂಡು ಪರಿಶೀಲಿಸಿದ್ದೇನೆ. ಕೆಲವು ದಿನ ಮಾತ್ರ ಆಪರೇಶನಲ್ ವಿಚಾರಕ್ಕಾಗಿ ಸ್ವಲ್ಪ ತಡವಾಗಿದ್ದು ಬಿಟ್ಟರೆ ಒಟ್ಟಾರೆಯಾಗಿ ಸರಿಯಿದೆ. ಆದರೂ ಪ್ಯಾಸೆಂಜರ್ ರೈಲು ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

400 ಕೆ.ವಿ. ಲೈನ್:
ವಿಟ್ಲ ಭಾಗದಲ್ಲಿ 400 ಕೆ.ವಿ. ವಿದ್ಯುತ್ ಲೈನ್ ವಿಚಾರದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಜಿಲ್ಲಾಧಿಕಾರಿಗಳು ಸರಿ ಮಾಡಬೇಕಾಗುತ್ತದೆ. ಎರಡೂ ಭಾಗದ ಎ.ಸಿ.ಗಳು ಕುಳಿತು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯೋಜನೆ ಅಂತಿಮಗೊಂಡಿರುವ ಕಾರಣ ನಾನು ಪ್ಲ್ಯಾನ್ ಚೇಂಜ್ ಮಾಡಲು ಸಾಧ್ಯವಿಲ್ಲ. ರೈತರ ಮೇಲೆ ದಬ್ಬಾಳಿಕೆ ಆಗದಂತೆ ನಡೆದುಕೊಳ್ಳಬೇಕೆಂದು ಸೂಚನೆ ನೀಡಿದ್ದೇನೆ ಎಂದವರು ನುಡಿದರು. ಮಾಣಿ- ಸಂಪಾಜೆ ಹೆದ್ದಾರಿ ಚತುಷ್ಪಥ ಕಾಮಗಾರಿ ಯೋಜನೆಯನ್ನು ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಸೇರಿಸುವಂತೆ ಕೇಂದ್ರೆ ಹೆದ್ದಾರಿ ಸಚಿವರಿಗೆ ಮನವಿ ಮಾಡಿದ್ದೇನೆ ಎಂದವರು ಹೇಳಿದರು.


