Breaking
23 Sep 2026, Wed

ಮಳೆಯಿಂದ ಶಿಥಿಲಗೊಂಡಿದ್ದ ಶಾಲೆಯ ಗೇಟ್ ಕುಸಿದು 4 ವರ್ಷದ ಬಾಲಕಿ ಸಾವು

ಕುಶಾಲನಗರ: ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯೊಂದಿಗೆ ಕಬ್ಬಿಣದ ಗೇಟ್ ಕಳಚಿ ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಬಸವನಹಳ್ಳಿ ಹಾಡಿಯ ಸತೀಶ್ ಮತ್ತು ಪವಿತ್ರ ದಂಪತಿಯ ಪುತ್ರಿ ಅಪೂರ್ವ (4) ಎಂದು ಗುರುತಿಸಲಾಗಿದೆ.

ಬಾಲಕಿಯ ಅಕ್ಕ ಬಸವನಹಳ್ಳಿ ಹಾಡಿಯ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯನ್ನು ಕರೆತರಲು ಅಪೂರ್ವ ಪ್ರತಿದಿನ ಶಾಲೆಯ ಗೇಟ್ ಬಳಿ ಬಂದು ಆಟವಾಡುತ್ತಿದ್ದಳು ಎನ್ನಲಾಗಿದೆ.

ಶುಕ್ರವಾರ ಸಂಜೆ ಎಂದಿನಂತೆ ಶಾಲೆಯ ಗೇಟ್ ಬಳಿ ಬಾಲಕಿ ಆಟವಾಡುತ್ತಿದ್ದ ವೇಳೆ, ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯೊಂದಿಗೆ ಬೃಹತ್ ಕಬ್ಬಿಣದ ಗೇಟ್ ಏಕಾಏಕಿ ಕಳಚಿ ಬಾಲಕಿಯ ಮೇಲೆ ಬಿದ್ದಿದೆ.

ಗೇಟ್ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಅಪೂರ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯಿಂದ ಬಸವನಹಳ್ಳಿ ಹಾಡಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶಾಲೆಯ ಆವರಣದಲ್ಲಿನ ಶಿಥಿಲಗೊಂಡಿರುವ ಕಟ್ಟಡ ಹಾಗೂ ಕಾಂಪೌಂಡ್‌ಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *