Breaking
8 Aug 2026, Sat

ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ: ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ: ಒಂಟಿ ಮಹಿಳೆಯಿದ್ದ ಮನೆಗೆ ಬಾಡಿಗೆ ಮನೆಯ ನೆಪದಲ್ಲಿ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉರ್ವ ಮಠದ ಕಣಿ ನಿವಾಸಿ ಬಾಲ ಸುಬ್ರಮಣ್ಯ (49) ಹಾಗೂ ಮಣ್ಣಗುಡ್ಡ ಬೊಕ್ಕಪಟ್ಟ ಚರ್ಚ್‌ ಬಳಿ ನಿವಾಸಿ ಶ್ಯಾಮ್ ಕುಮಾರ್ (33) ಎಂದು ಗುರುತಿಸಲಾಗಿದೆ.

ಆಗಸ್ಟ್ 3ರಂದು ಕುರ್ನಾಡು ಕಾಯರ್‌ಗೋಳಿ ಬಳಿ ಭವಾನಿ ಎಂಬವರು ಒಂಟಿಯಾಗಿ ವಾಸಿಸುತ್ತಿದ್ದ ಮನೆಗೆ ಆರೋಪಿಗಳು ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಬಂದಿದ್ದರು. ಬಾಗಿಲು ಬಡಿದು ಮಹಿಳೆಯ ಮನೆಯೊಳಗೆ ಪ್ರವೇಶಿಸಿದ ಆರೋಪಿಗಳು, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಮುಡಿಪು, ಕಾಯರ್‌ಗೋಳಿ, ಮಂಗಳೂರು ಹಾಗೂ ಬಂಟ್ವಾಳ ಮೆಲ್ಕಾರ್‌ವರೆಗಿನ ವಿವಿಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಗಳು ಮಂಗಳೂರು ಮೂಲದವರು ಎಂಬ ಮಾಹಿತಿ ಕಲೆಹಾಕಿದ್ದರು. ಬಳಿಕ ಮಂಗಳೂರಿನ ಮರೋಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ್ದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನಿಖೆಯಲ್ಲಿ ಮತ್ತಷ್ಟು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಆರೋಪಿ ಬಾಲ ಸುಬ್ರಮಣ್ಯ ಹಲಸು ಸೀಸನ್‌ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಮನೆಗಳಲ್ಲಿರುವ ಹಲಸು ಖರೀದಿಸುವ ನೆಪದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. ಸುಮಾರು 20 ದಿನಗಳ ಹಿಂದೆ ಭವಾನಿ ಅವರ ಮನೆಗೂ ಹಲಸು ಖರೀದಿಸುವ ನೆಪದಲ್ಲಿ ಬಂದಿದ್ದ ಬಾಲ ಸುಬ್ರಮಣ್ಯ, ಆ ಸಂದರ್ಭದಲ್ಲಿ ಮನೆಯ ಮಾಹಿತಿ ಪಡೆದು ದರೋಡೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಬಾಲ ಸುಬ್ರಮಣ್ಯನ ಸಂಬಂಧಿಕನಾಗಿರುವ ಶ್ಯಾಮ್ ಕುಮಾರ್‌ನ ರಿಕ್ಷಾ ಹಾಳಾಗಿದ್ದು, ಬೇರೆ ರಿಕ್ಷಾಕ್ಕೆ ಹಣ ಕೊಡಿಸುವುದಾಗಿ ಹೇಳಿ ಆತನನ್ನು ಕರೆತಂದು ದರೋಡೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ಎರಡು ಸುಲಿಗೆ ಪ್ರಕರಣಗಳು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿವೆ. ಶ್ಯಾಮ್ ಕುಮಾರ್ ಇದೇ ಮೊದಲ ಬಾರಿಗೆ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿರೂಪಾಕ್ಷ ಸ್ವಾಮಿ, ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐಗಳಾದ ನಾಗರಾಜ್ ಹಾಗೂ ಪುನೀತ್ ಗಾಂಡ್ಕರ್, ಎಎಸ್‌ಐ ಸೃಜನ್ ಶೆಟ್ಟಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಇಸಾಕ್, ಸುನೀಲ್, ಶೈಲೇಂದ್ರ, ಬಸವನಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *