ಉಡುಪಿ: ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರಾಖಂಡ ಮೂಲದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23)ನನ್ನು ಕುಮಟಾದಲ್ಲಿ ಹಾಗೂ ಬಿಹಾರ ಮೂಲದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38)ನನ್ನು ಭಟ್ಕಳದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಉತ್ತರ ಪ್ರದೇಶದ ರಾಜು (42) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ವೇಳೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ ಮೂಲಕ ಭಟ್ಕಳದತ್ತ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಬೈಂದೂರಿನ ಒತ್ತಿನೆಣೆ ಬಳಿ ಬಸ್‌ನ್ನು ತಡೆದು ಪೊಲೀಸರು ತಪಾಸಣೆ ನಡೆಸಿದಾಗ ಮೂವರು ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ರಾಜು, ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ, ಅವರ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಆತ್ಮರಕ್ಷಣೆಗಾಗಿ ಪೊಲೀಸರು ರಾಜುವಿನ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪರಾರಿಯಾಗಿದ್ದ ಅಜಯ್ ರಸ್ತೋಗಿಯನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ದೀಪಕ್‌ನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಎರ್ಮಾಳ್‌ನಲ್ಲಿ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡೇವಿಡ್ ಡಿಸೋಜಾ ಅವರು ‘ಪ್ರಿನ್ಸ್ ಎಂಟರ್‌ಪ್ರೈಸಸ್’ ನಡೆಸುತ್ತಿದ್ದರು. ಕಚೇರಿಯಿಂದ ಹೊರಬಂದು ಥಾರ್ ವಾಹನದತ್ತ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026ರಡಿ ಬಿಎನ್‌ಎಸ್‌ನ ಕಲಂ 103, 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 3, 25ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ತನಿಖೆಯ ಪ್ರಕಾರ, ಡೇವಿಡ್ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯರಾಜ್ಯದ ಕಂಪೆನಿಯೊಂದರೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡೇವಿಡ್ ಅವರ ಹತ್ಯೆಗೆ ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಕೃತ್ಯಕ್ಕೆ ಸಹಕರಿಸಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಕಾಪು, ಬೈಂದೂರು, ಕುಂದಾಪುರ, ಶಿರ್ವ, ಕೊಲ್ಲೂರು, ಕಾರ್ಕಳ ಗ್ರಾಮಾಂತರ ಹಾಗೂ ಪಡುಬಿದ್ರಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾ ತಂಡ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


