Breaking
25 Sep 2026, Fri

ಸಮಾಜ ಬಾಂಧವರ ಕಷ್ಟ–ಸುಖ ಅರಿಯಲು ಕುಟುಂಬ ಮಿಲನ ಸಹಕಾರಿ: ರುಕ್ಮಯ ಪೂಜಾರಿ

ಕಲ್ಲಡ್ಕ: ಸಮಾಜ ಬಾಂಧವರ ಕಷ್ಟ–ಸುಖಗಳನ್ನು ಅರಿತು ಪರಸ್ಪರ ಬಾಂಧವ್ಯ ಬೆಳೆಸಲು ಕುಟುಂಬ ಮಿಲನ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಮಾಜಿ ಶಾಸಕಿ ರುಕ್ಮಯ ಪೂಜಾರಿ ಏಳ್ತಿಮಾರು ಹೇಳಿದರು.

ಅವರು ಆಗಸ್ಟ್ 9ರಂದು ವೀರಕಂಭ ಗ್ರಾಮದ ತೆಕ್ಕಿಪಾಪು ಸಮೀಪದ ಪ್ರಶಾಂತ್ ಪೂಜಾರಿ ಅವರ ಮನೆಯ ವಠಾರದಲ್ಲಿ ಮೋನಪ್ಪ ಪೂಜಾರಿ ತೆಕ್ಕಿಪಾಪು ವೇದಿಕೆಯಲ್ಲಿ ನಡೆದ ಬಿಲ್ಲವ ಕುಟುಂಬ ಮಿಲನ–2026 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಬಿಲ್ಲವ ಸಂಘ (ರಿ.) ಕಲ್ಲಡ್ಕ ವಲಯ ಹಾಗೂ ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯದ ಆಶ್ರಯದಲ್ಲಿ, ಗೋಳ್ತಮಜಲ್, ವೀರಕಂಭ, ಬಾಳ್ತಿಲ, ಅಮ್ಟೂರು, ಬೋಳಂತೂರು ಮತ್ತು ಬೊಂಡಲ ಬಿಲ್ಲವ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳು ಹಾಗೂ ಜಾನಪದ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಂದ್ರ ಅಮೀನ್ ಮರಕಡಬೈಲು, ಮನಮೋಹನ ಅಮ್ಟೂರು, ಗುರುವಪ್ಪ ಪೂಜಾರಿ ಪಾದೆ, ಕರುಣಾಕರ ಪೂಜಾರಿ ಬಲ್ಕಟ, ನಳಿನಿ ಮೋನಪ್ಪ ಪೂಜಾರಿ ತೆಕ್ಕಿಪಾಪು, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಲಾವಣ್ಯ ಸುಂದರ ಹಾಗೂ ಕಲ್ಲಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಯಪ್ರಕಾಶ್ ತೆಕ್ಕಿಪಾಪು ಮನವಿ ಪತ್ರ ವಾಚಿಸಿದರು. ರವೀಂದ್ರ ಪಾದೆ ವಂದಿಸಿದರು. ದಿನೇಶ್ ಕೃಷ್ಣಕೋಡಿ ಹಾಗೂ ಕೃತಿ ಪೂಜಾರ್ತಿ ಕುಂಟಿಪಾಪು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *