ಮಣಿಪುರ: ಉಡುಪಿ ಸಮೀಪದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂದೂರುಕಟ್ಟೆಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ಗೆ ಶುಕ್ರವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ನಿಲ್ಲಿಸಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪೆಟ್ರೋಲ್ ಪಂಪ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದ ಬಸ್‌ನ ಪಕ್ಕದಲ್ಲೇ ಇನ್ನೂ ಎರಡು ಬಸ್‌ಗಳು ಹಾಗೂ ಒಂದು ಟೆಂಪೋ ನಿಲ್ಲಿಸಲಾಗಿತ್ತು. ಅಲ್ಲದೆ, ಸಮೀಪದಲ್ಲೇ ಪೆಟ್ರೋಲ್ ಪಂಪ್ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಇತರ ವಾಹನಗಳಿಗೆ ಅಥವಾ ಪಂಪ್‌ಗೆ ವ್ಯಾಪಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಹೆಚ್ಚಿನ ಅಪಾಯ ತಪ್ಪಿದೆ.

ಬಸ್ ಹಾಗೂ ಪೆಟ್ರೋಲ್ ಪಂಪ್ ಒಂದೇ ವ್ಯಕ್ತಿಯ ಮಾಲೀಕತ್ವದಲ್ಲಿದ್ದು, ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




