ಖ್ಯಾತ ವ್ಯಂಗ್ಯಚಿತ್ರಕಾರ ಕೇಂಜ ವಾಸು ಶೆಟ್ಟಿ ನಿಧನ

ಶಿರ್ವ: ಖ್ಯಾತ ವ್ಯಂಗ್ಯಚಿತ್ರಕಾರ ವಿಎಸ್ ಕೇಂಜ ಎಂದೇ ಖ್ಯಾತನಾಮರಾಗಿದ್ದ ಕುತ್ಯಾರು ಕೇಂಜ ನಿವಾಸಿ ವಾಸು ಶೆಟ್ಟಿ (78) ಅವರು ಸೆ.12ರಂದು ನಿಧನ ಹೊಂದಿದ್ದಾರೆ.

ಮುಂಬಯಿಯ ಆಮದು-ರಫ್ತು ಕಂಪೆನಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಅಂಚೆ ಮೂಲಕ ಚಿತ್ರಕಲೆಯ ಶಿಕ್ಷಣ ಪಡೆದಿದ್ದು, ಪತ್ರಿಕೆಗಳಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳಿಂದ ಸ್ಪೂರ್ತಿಗೊಂಡು ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡಿದ್ದರು.

ವಾಸು ಶೆಟ್ಟಿ ಅವರ ಮೊದಲ ವ್ಯಂಗ್ಯಚಿತ್ರ 1978ರಲ್ಲಿ ತುಷಾರ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ತುಷಾರ ಸಹಿತ ಮುಂಬಯಿ ಮತ್ತು ಕರ್ನಾಟಕದ ವಿವಿಧ ಕನ್ನಡ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಸಂಜೆ ಪತ್ರಿಕೆಗಳಲ್ಲಿ ಅವರ ವ್ಯಂಗ್ಯ ಚಿತ್ರಗಳು ಪ್ರಕಟಗೊಳ್ಳುತ್ತಿದ್ದವು.

1990ರಲ್ಲಿ ನಡೆದ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ನಡೆಸಿದ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಬಳಿಕ ವಿವಿಧ ಪತ್ರಿಕೆಗಳ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಮುಂಬಯಿ ಮತ್ತು ಕರ್ನಾಟಕದ ವಿವಿಧ ಸಂಘ ಸಂಸ್ಥೆಗಳು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿವೆ.

ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *