ಮುಂಬೈ: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಗುಡ್ಡದ ಒಂದು ಭಾಗ ಕುಸಿದು ಚಾಲ್‌ನ ಮನೆಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 4ರಿಂದ 5 ಮಂದಿ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಬುಧವಾರ (ಆ.12) ಮುಂಜಾನೆ 3.48ರ ಸುಮಾರಿಗೆ ಕುರ್ಲಾ–ಘಾಟ್‌ಕೋಪರ್ ಗಡಿ ಭಾಗದ ಚಿರಾಗ್ ನಗರದ ಗೌಸಿಯಾ ಚಾಲ್‌ನಲ್ಲಿ ನಡೆದಿದೆ.

ಭಾರಿ ಮಳೆಯಿಂದ ಬೆಟ್ಟದ ಭಾಗ ಕುಸಿದು ಚಾಲ್‌ನ 2ರಿಂದ 3 ಮನೆಗಳ ಮೇಲೆ ಮಣ್ಣು ಬಿದ್ದಿದೆ. ಘಟನೆ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸರು, ಬೃಹನ್‌ಮುಂಬೈ ಮಹಾನಗರ ಪಾಲಿಕೆ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ಘಟನೆಯಲ್ಲಿ ಗಾಯಗೊಂಡ 18 ವರ್ಷದ ಸೊಹೇಲ್ ಅನ್ಸಾರಿ ಹಾಗೂ 14 ವರ್ಷದ ಮೊಹಮ್ಮದ್ ಅನ್ಸಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ಗಣೇಶ್ ಶಿಂಧೆ, ಮುಂಬೈ ಮೇಯರ್ ರಿತು ತಾವಡೆ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಣ್ಣಿನ ಅಡಿಯಲ್ಲಿ ಸಿಲುಕಿರುವವರ ಪತ್ತೆಗಾಗಿ ಅಗತ್ಯ ಉಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಬಾಧಿತ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.





