ಸುರತ್ಕಲ್: ಗುಡ್ಡೆಕೊಪ್ಲದಲ್ಲಿರುವ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್‌ನಲ್ಲಿ ಆ.10ರಂದು ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು ₹1.60 ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಅಗ್ನಿ ಅವಘಡದಲ್ಲಿ ಗ್ರಾಫಿಕ್ಸ್ ಸೆಂಟರ್‌ನಲ್ಲಿದ್ದ ಪ್ರಿಂಟಿಂಗ್ ಯಂತ್ರೋಪಕರಣಗಳು ಸೇರಿದಂತೆ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ರಾತ್ರಿ ವೇಳೆ ಸ್ಥಳೀಯರು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







