ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಿಂದ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಅಳಿವೆ ಬಾಗಿಲು ಬಳಿ ಆ.9ರಂದು ನಡೆದಿದೆ.
ನಾಪತ್ತೆಯಾದವರನ್ನು ಕಿರಿಮಂಜೇಶ್ವರ ಗ್ರಾಮದ ಕೋಡೇರಿ ಗಂಗೆಬೈಲು ನಿವಾಸಿ ನಾರಾಯಣ (31) ಎಂದು ಗುರುತಿಸಲಾಗಿದೆ.

ಆ.3ರಂದು ಮಂಗಳೂರಿನ ಮೀನುಗಾರಿಕೆ ದಕ್ಕೆಯಿಂದ ಚಾಲಕ ರವಿ ಸೇರಿದಂತೆ ವಿಶ್ವನಾಥ, ಗಣಪತಿ, ಅಶೋಕ, ಪ್ರವೀಣ್, ದುರ್ಗಣ್ಣ ಹಾಗೂ ನಾರಾಯಣ ಮೀನುಗಾರಿಕೆಗೆ ತೆರಳಿದ್ದರು.
ಆ.9ರಂದು ಮಧ್ಯಾಹ್ನ ಅಳಿವೆ ಬಾಗಿಲು ಬಳಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಬೋಟ್‌ನಲ್ಲಿದ್ದ ನಾರಾಯಣ ಅವರು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ತಕ್ಷಣ ಬೋಟ್‌ನಲ್ಲಿದ್ದ ಇತರ ಮೀನುಗಾರರು ಹುಡುಕಾಟ ನಡೆಸಿದ್ದು, ಸಮೀಪದಲ್ಲಿದ್ದ ಇತರ ಬೋಟ್‌ಗಳಿಗೂ ಮಾಹಿತಿ ನೀಡಿದ್ದಾರೆ. ಆದರೂ ನಾರಾಯಣ ಪತ್ತೆಯಾಗಿಲ್ಲ.
ನಾಪತ್ತೆಯಾಗಿರುವ ನಾರಾಯಣ ಅವರ ಸಹೋದರ ಆ.10ರಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ನಾರಾಯಣ ಅವರಿಗಾಗಿ ಸಮುದ್ರದಲ್ಲಿ ಹುಡುಕಾಟ ಮುಂದುವರಿದಿದೆ.






