Breaking
12 Aug 2026, Wed

ಮಂಗಳೂರು: ಪೊಲೀಸರ ಕಾರ್ಯಾಚರಣೆ; ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಮಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಸರಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಲಾಗಿದ್ದು, ಸುರತ್ಕಲ್ ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಆರೋಪಿಯನ್ನೂ ಸುರತ್ಕಲ್ ಪೊಲೀಸರು ಸೆರೆಹಿಡಿದಿದ್ದಾರೆ.

ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಸರಕಳ್ಳ ವಿಜಯಪುರದಲ್ಲಿ ಸೆರೆ

ಜೂ.14ರಂದು ಸೂಟರ್‌ಪೇಟೆಯ ಗ್ರಾಮ ಲೆಕ್ಕಿಗರ ಕಚೇರಿ ಬಳಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಸಿದು ಬೈಕ್‌ನಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.26ರಂದು ಪಾಂಡೇಶ್ವರ ಪೊಲೀಸರು ಮೂವರನ್ನು ಬಂಧಿಸಿದ್ದರು.

ಆರೋಪಿಗಳನ್ನು ಠಾಣೆಗೆ ಕರೆತರುತ್ತಿದ್ದ ವೇಳೆ ಬಾಗಲಕೋಟೆ ಮೂಲದ ಪ್ರಮುಖ ಆರೋಪಿ ಅಲ್ತಾಫ್ ಹುಸೇನ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಶದಿಂದ ತಪ್ಪಿಸಿಕೊಂಡಿದ್ದನು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪರಾರಿಯಾಗಿದ್ದ ಅಲ್ತಾಫ್ ಹುಸೇನ್‌ನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆ.10ರಂದು ವಿಜಯಪುರ ನಗರದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ವಿರುದ್ಧ ಕರ್ನಾಟಕದ ವಿವಿಧೆಡೆ ಆರು ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನದ ಕಾಣಿಕೆ ಹುಂಡಿ ಕದ್ದ ಆರೋಪಿ ಬಂಧನ

ಮತ್ತೊಂದು ಪ್ರಕರಣದಲ್ಲಿ ಸುರತ್ಕಲ್‌ನ ಮಧ್ಯ ಕೊಡಿಪಾಡಿಯಲ್ಲಿರುವ ಕೋರ್ದಗಬ್ಬು ದೈವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆ.5ರಂದು ರಾತ್ರಿ ಕಬ್ಬಿಣದ ಆಯುಧ ಬಳಸಿ ದೇವಸ್ಥಾನದ ಬಾಗಿಲು ಹಾಗೂ ಕಿಟಕಿ ಒಡೆದು ಒಳನುಗ್ಗಿದ್ದ ಕಳ್ಳರು, ಸುಮಾರು ₹15 ಸಾವಿರ ನಗದು ಇದ್ದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದರು.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆ.10ರಂದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಉಡುಪಿ ಮೂಲದ ಸುಖೇಶ್ ನಾಯ್ಕ್ (40) ಎಂಬಾತನನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣಗಳು ಹಾಗೂ ಹಲವು ವಾರೆಂಟ್‌ಗಳು ಬಾಕಿ ಇರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಂಗಳೂರು ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *