ಉಡುಪಿ: ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ.ರೋಡ್ ವತಿಯಿಂದ ಪಡುಬೆಳ್ಳೆಯ ಲಯನ್ ಪೆಲ್ವಿನ್ ಕ್ವಾಡ್ರಸ್ ಅವರ ನಿವಾಸದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಆ.11ರಂದು ನಡೆಯಿತು.
ಆಟಿ ತಿಂಗಳ ಸಂಪ್ರದಾಯ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಲಯನ್ಸ್ ಸದಸ್ಯರು ಹಾಗೂ ಕುಟುಂಬದವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317Cಯ ಪ್ರಥಮ ಉಪ ಜಿಲ್ಲಾ ಗವರ್ನರ್ PMJF ಲಯನ್ ಹರಿಪ್ರಸಾದ್ ರೈ ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಶೇಷ ಅತಿಥಿ ಲಯನ್ ರಾಜೇಶ್ ಜೋಗಿ ಆಟಿ ತಿಂಗಳ ಹಿನ್ನೆಲೆ, ಆಚರಣೆಗಳು, ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ಹಿಂದಿನ ತಲೆಮಾರುಗಳ ಜೀವನಶೈಲಿಯ ಕುರಿತು ಮಾಹಿತಿ ನೀಡಿದರು.

ಕ್ಲಬ್ ಅಧ್ಯಕ್ಷ ಲಯನ್ ಟೋನಿ ಮೊನಿಸ್ ಮಾತನಾಡಿ, ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ, ಎಲ್ಲರೂ ಒಂದೇ ಲಯನ್ಸ್ ಕುಟುಂಬದಂತೆ ಒಗ್ಗೂಡಿ ಇಂತಹ ಕಾರ್ಯಕ್ರಮಗಳನ್ನು ಆಚರಿಸುವ ಮಹತ್ವವನ್ನು ಅವರು ವಿವರಿಸಿದರು.

ಆಟಿಡೊಂಜಿ ದಿನದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಪಡುಬೆಳ್ಳೆಯ ಬಡ ಕುಟುಂಬವೊಂದನ್ನು ಗುರುತಿಸಿ, ಅಗತ್ಯ ದಿನಸಿ ಸಾಮಗ್ರಿಗಳನ್ನೊಳಗೊಂಡ ರೇಷನ್ ಕಿಟ್ ವಿತರಿಸಲಾಯಿತು. PMJF ಲಯನ್ ಹರಿಪ್ರಸಾದ್ ರೈ ಅವರು ರೇಷನ್ ಕಿಟ್ ಹಸ್ತಾಂತರಿಸಿದರು. ಇದನ್ನು MJF ಲಯನ್ ಫೆಲಿಕ್ಸ್ ಫೆರ್ನಾಂಡಿಸ್ ಪ್ರಾಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 30 ಬಗೆಯ ಸಾಂಪ್ರದಾಯಿಕ ಆಟಿ ಖಾದ್ಯಗಳನ್ನು ಸದಸ್ಯರು ಹಾಗೂ ಕುಟುಂಬದವರು ತಯಾರಿಸಿ ತಂದಿದ್ದರು. ಎಲ್ಲರೂ ಒಟ್ಟಾಗಿ ಕುಳಿತು ಸಾಂಪ್ರದಾಯಿಕ ಊಟ ಸವಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ. ರೋಡ್‌ನ ಅಧ್ಯಕ್ಷ ಲಯನ್ ಟೋನಿ ಮೊನಿಸ್, ಕಾರ್ಯದರ್ಶಿ ಲಯನ್ ಪೆಲ್ವಿನ್ ಕ್ವಾಡ್ರಸ್, ಖಜಾಂಚಿ ಲಯನ್ ಸ್ಯಾಮ್ಸನ್ ನೊರೊನ್ಹಾ ಹಾಗೂ ಎಲ್ಲಾ ಕ್ಲಬ್ ಸದಸ್ಯರ ಪರವಾಗಿ ಮುಖ್ಯ ಅತಿಥಿ PMJF ಲಯನ್ ಹರಿಪ್ರಸಾದ್ ರೈ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಕ್ಲಬ್ ಅಧ್ಯಕ್ಷ ಲಯನ್ ಟೋನಿ ಮೊನಿಸ್ ಅವರ ಹುಟ್ಟುಹಬ್ಬವನ್ನು ಸದಸ್ಯರು ಹಾಗೂ ಕುಟುಂಬದವರೊಂದಿಗೆ ಆಚರಿಸಲಾಯಿತು.
ಸಂಪ್ರದಾಯ, ಸಂಸ್ಕೃತಿ, ಸೌಹಾರ್ದತೆ ಹಾಗೂ ಸೇವೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸದಸ್ಯರು ಹಾಗೂ ಕುಟುಂಬದವರಿಗೆ ಸ್ಮರಣೀಯ ಅನುಭವ ನೀಡಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ. ರೋಡ್ ಅಧ್ಯಕ್ಷ ಲಯನ್ ಟೋನಿ ಮೊನಿಸ್, ಕಾರ್ಯದರ್ಶಿ ಲಯನ್ ಪೆಲ್ವಿನ್ ಕ್ವಾಡ್ರಸ್ ಹಾಗೂ ಖಜಾಂಚಿ ಲಯನ್ ಸ್ಯಾಮ್ಸನ್ ನೊರೊನ್ಹಾ ಸೇರಿದಂತೆ ಕ್ಲಬ್‌ನ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಲಯನ್ ಟೋನಿ ಮೊನಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಲಯನ್ ಪೆಲ್ವಿನ್ ಕ್ವಾಡ್ರಸ್ ಧನ್ಯವಾದ ಸಲ್ಲಿಸಿದ್ದು, ಲಯನ್ ವಿಜಯ್ ಧೀರಜ್ ನಿರೂಪಿಸಿದರು.





