ಬೆಳ್ತಂಗಡಿ: ಲಾಯಿಲ ಗ್ರಾಮದ ಗುರಿಂಗಾನ ರಸ್ತೆಯಲ್ಲಿ ಹಲವು ವರ್ಷಗಳಿಂದ ಇದ್ದ ಬೀದಿ ದೀಪಗಳ ಕೊರತೆಯ ಸಮಸ್ಯೆಗೆ ಇದೀಗ ಪರಿಹಾರ ದೊರೆತಿದ್ದು, ಗ್ರಾಮ ಪಂಚಾಯತ್ ವತಿಯಿಂದ ಹೊಸ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಭಾರಿ ಮಳೆಯಿಂದ ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮಾವತಿ ನದಿ ಉಕ್ಕಿ ಹರಿದು ಮನೆಗಳು ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಆ.5ರಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದರು.

ಈ ವೇಳೆ ಗುರಿಂಗಾನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ದೀಪಗಳಿಲ್ಲದಿರುವ ಬಗ್ಗೆ ಸ್ಥಳೀಯರು ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರ ಗಮನಕ್ಕೆ ತಂದಿದ್ದರು. ಸಮಸ್ಯೆಯನ್ನು ಆಲಿಸಿದ ಸಚಿವರು, ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರಾನಾಥ್ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದೇ ವೇಳೆ ರಕ್ಷಿತ್ ಶಿವರಾಂ ಅವರು ಬೀದಿ ದೀಪಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.

ಸಚಿವರ ಸೂಚನೆ ಹಾಗೂ ರಕ್ಷಿತ್ ಶಿವರಾಂ ಅವರ ಪ್ರಯತ್ನಕ್ಕೆ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್, ಕಂಬಗಳಲ್ಲಿ ಎಚ್‌ಟಿ ಲೈನ್ ಮಾತ್ರ ಇದ್ದ ಹಿನ್ನೆಲೆಯಲ್ಲಿ ಎಲ್‌ಟಿ ವಿದ್ಯುತ್ ಲೈನ್ ಅಳವಡಿಸಿ ಗುರಿಂಗಾನ ರಸ್ತೆ ಬದಿಯಲ್ಲಿ ಹೊಸ ಬೀದಿ ದೀಪಗಳನ್ನು ಅಳವಡಿಸಿದೆ.

ಬೀದಿ ದೀಪಗಳ ಕೊರತೆಯಿಂದ ರಾತ್ರಿ ವೇಳೆ ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ದೀಪಗಳ ಅಳವಡಿಕೆಯಿಂದ ರಾತ್ರಿ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯೂ ಹೆಚ್ಚಲಿದೆ.

ಬಹುವರ್ಷಗಳ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




