ಮಂಗಳೂರು: ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ಮಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳೂರು ತೊಕ್ಕೊಟ್ಟಿನ ದೇರಳಕಟ್ಟೆ ಸಮೀಪ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ (24) ಎಂಬವರನ್ನು ಬಂಧಿಸಲಾಗಿದ್ದು, ದಾಳಿ ಸಂದರ್ಭ ಥೋಮಸ್ ಮತ್ತು ಮಣಿಕುಟ್ಟನ್ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯಲ್ಲಿ ಥೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡು ಅಕ್ರಮವಾಗಿ ಮದ್ಯ ತಯಾರಿ ನಡೆಸುತ್ತಿದ್ದರು.
ಬಂಧಿತ ಆರೋಪಿಗಳನ್ನು ಪೊಲೀಸರು ಮನೆಗೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದು, ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಸುಮಾರು 1,15,110 ರೂ. ಮೌಲ್ಯದ ಮದ್ಯ ಅಕ್ರಮ ತಯಾರಿಕೆಯ ಮೂರು ಮೆಷಿನ್ ಗಳು ಮತ್ತು ಮಿಕ್ಸರ್ ಮಷಿನ್, ಮದ್ಯದ ಬಾಟ್ಲಿಗಳು, ಗೋವದಲ್ಲಿ ಮಾತ್ರ ಮಾರಾಟ ಮಾಡುವ ಲೈಸೆನ್ಸ್ ಇರುವ 8 ಮನ್ಶನ್ ಹೌಝ್ ಎಂಬ ಹೆಸರಿನ ಮದ್ಯದ ಬಾಟ್ಲಿಗಳು, ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಇನ್ನು ಇತ್ತ ಪರಾರಿಯಾಗಿರುವ ಆರೋಪಿ ಥೋಮಸ್ ಮತ್ತು ಮಣಿಕುಟ್ಟನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




