ತಿರುಪತಿ:ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾದ ವಿಷಯ ಭಾರೀ ವಿವಾದ ಸೃಷ್ಟಿಸಿರುವಂತೆಯೇ ದೇಗುಲದಲ್ಲಿ ಕಲಬೆರಕೆ ಪತ್ತೆ ಯಂತ್ರ ಅಳವಡಿಸಲು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ನಿರ್ಧರಿಸಿದೆ. ಈ ಡಿಸೆಂಬರ್ ಯಾ ಮುಂದಿನ ಜನವರಿ ಒಳಗೆ ವಿದೇಶದಿಂದ ಕಲಬೆರಕೆ ಪತ್ತೆ ಅಥವಾ ಗುಣಮಟ್ಟ ಪರೀಕ್ಷೆ ಯಂತ್ರವನ್ನು ತರಿಸಲಾಗುತ್ತದೆ ಎಂದು ದೇಗುಲ ಆಡಳಿತ ಮಂಡಳಿ ಹೇಳಿದೆ.
ಮಾಧ್ಯಮವೊಂದರ ಜತೆಗೆ ಮಾತನಾಡಿದ ಟಿಟಿಡಿ ಇ ಓ ಶ್ಯಾಮಲ ರಾವ್, ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಯು ದೇಗುಲಕ್ಕೆ ಈ ಯಂತ್ರವನ್ನು ಕೊಡುಗೆಯಾಗಿ ನೀಡಲಿದೆ. ವರ್ಷಾಂತ್ಯ ಅಥವಾ ಜನವರಿಯೊಳಗಾಗಿ ಹೊಸ ಯಂತ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಅದನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಟಿಟಿಡಿ ವತಿಯಿಂದ ನೀಡಲಾಗುವ ಆಹಾರ ಮತ್ತು ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸುವ, ಪರಿಶುದ್ಧತೆಯನ್ನು ಖಾತ್ರಿಪಡಿಸುವ ಎಲ್ಲ ವ್ಯವಸ್ಥೆಯನ್ನೂ ಅದು ಒಳಗೊಂಡಿರಲಿದೆ ಎಂದರು.
ಸ್ವಂತ ಯಂತ್ರ ಅಳವಡಿಕೆ ಆಗುವವರೆಗೆ ಲಡ್ಡು ಮತ್ತು ಇತರ ಪ್ರಸಾದ ಮತ್ತು ಆಹಾರಗಳ ಗುಣಮಟ್ಟ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಅದನ್ನು ಈಗಿನ ಪ್ರಯೋಗಾಲಯದಲ್ಲಿಯೇ ನಡೆಸಲಾಗುತ್ತದೆ ಎಂದು ರಾವ್ ತಿಳಿಸಿದ್ದಾರೆ. ತುಪ್ಪವನ್ನು ಮೊದಲ ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಜತೆಗೆ ಲಡ್ಡು ತಯಾರಿಸಲು ಬೇಕಾಗುವ ಇತರ ವಸ್ತುಗಳ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತದೆ ಎಂದು ಹೇಳಿದರು.