ಉಡುಪಿ: ಮನೆಗಳ್ಳತನ ಸೇರಿದಂತೆ ಹಲವೆಡೆ ಕಳವುಗೈದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಕಳ್ಳರಿಗೆ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ಆರೋಪಿಯೊಬ್ಬನನ್ನು ಉಡುಪಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿಯ ಉಪ್ಪಳ್ಳಿ ನಿವಾಸಿ ಕೆ.ಇ.ಮೊಹಮ್ಮದ್ ಎಂದು ಗುರುತಿಸಲಾಗಿದೆ.

ಈತನಿಂದ ಒಟ್ಟು 182 ಗ್ರಾಂ ಚಿನ್ನದ ಗಟ್ಟಿಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಜಿಲ್ಲೆಯ ಶಿರ್ವ, ಪಡುಬಿದ್ರಿ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿರುವ ಚಿನ್ನದ ಗಟ್ಟಿಗಳನ್ನು ಮೊಹಮ್ಮದ್ ತನ್ನ ಬಳಿ ಇರಿಸಿಕೊಂಡು ಅವನ್ನು ಕರಗಿಸಿ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಉಡುಪಿ ಪೊಲೀಸ್ ಜಿಲ್ಲಾ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ ನೇತೃತ್ವದಲ್ಲಿ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್.ಮಾನೆ ನೇತೃತ್ವದ ತಂಡ ಪತ್ತೆ ಕಾರ್ಯಾಚರಣೆ ನಡೆಸಿದೆ.

ಈ ಹಿಂದೆ ದಸ್ತಗಿರಿ ಮಾಡಿದ ಆರೋಪಿ ಇತ್ತೆ ಬರ್ಪೆ ಅಬೂಬಕರ್ ಮತ್ತು ಸದ್ರಿ ಆರೋಪಿ ಕೆ.ಇ.ಮೊಹಮ್ಮದ್ ಅವರಿಂದ ಒಟ್ಟು 22.32 ಲಕ್ಷ ರೂ. ಮೌಲ್ಯದ 248.760 ಗ್ರಾಂ ತೂಕದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಲಾಗಿದೆ.


