Breaking
23 Mar 2026, Mon

ಮಂಗಳೂರು: ಕೆಲಸಕ್ಕೆಂದು ಬೆಂಗಳೂರಿಗೆ ಹೋದ ದೇರಳಕಟ್ಟೆ ಯುವಕ ನಾಪತ್ತೆ

ಮಂಗಳೂರು: ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ತಾಯಿಯಲ್ಲಿ ಹೇಳಿ ಹೋಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ನಿಯಾಜ್ (33) ಎಂದು ಗುರುತಿಸಲಾಗಿದೆ.

ನಿಯಾಜ್ ಆ.2ರಂದು ತನ್ನ ತಾಯಿ ಹಾಜಿರರವರಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಅದೇ ದಿನ ಮಧ್ಯಾಹ್ನ ಆತನ ಹೆಂಡತಿ ಶಹಳಳಿಗೆ ಕರೆ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿದ್ದಾರೆ. ನಂತರ ಶಹಳ ಮತ್ತೆ ಮೊಹಮ್ಮದ್ ನಿಯಾಜ್ ನಿಗೆ ಫೋನ್ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಮೊಹಮ್ಮದ್ ನಿಯಾಜ್ ತನ್ನ ಮನೆಗೂ ಬಾರದೆ, ಹೆಂಡತಿಯ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.

ಇವರು ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಬ್ಯಾರಿ, ಕನ್ನಡ, ತುಳು, ಹಿಂದಿ, ಮಲಯಾಳಂ ಭಾಷೆಯನ್ನು ತಿಳಿದಿದ್ದಾರೆ. ಇವರು ನಾಪತ್ತೆಯಾದ ದಿನ ಬಿಳಿ ಬಣ್ಣದ ಪ್ರಿಂಟೆಡ್ ಶರ್ಟ್ ಹಾಗೂ ಕಪ್ಪು ಬಣ್ಣದ ಫಾರ್ಮಲ್ಸ್ ಪ್ಯಾಂಟ್ ಧರಿಸಿದ್ದರು ಎಂದು ತಿಳಿದುಬಂದಿದ್ದು ಇವರ ಮಾಹಿತಿ ಸಿಕ್ಕಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *