ಉತ್ತರ ಪ್ರದೇಶ : ಐಫೋನ್ ಗಾಗಿ ಅಪ್ರಾಪ್ತರು ಯುವಕನ ಕತ್ತು ಸೀಳಿ ಹತ್ಯೆಗೈದಿರುವ ಭಯಾನಕ ಘಟನೆಯೊಂದು ಉತ್ತರಪ್ರದೇಶದ ಬಹ್ರೈಚ್ ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ನಿವಾಸಿಯಾಗಿರುವ ಶಾದಾಬ್ (19) ಕೊಲೆಯಾದವರು. ಏನಿದು ಘಟನೆ? ಬೆಂಗಳೂರು ನಿವಾಸಿಯಾಗಿರುವ ಶಾದಾಬ್ ತಮ್ಮ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿರುವ ನಾಗೌರ್‌ಗೆ ಜೂನ್ 18 ರಂದು ಬಂದಿದ್ದರು. ಇದಾದ ಬಳಿಕ ಕಾರ್ಯಕ್ರಮಗಳನ್ನು ಮುಗಿಸಿ ಜೂನ್ 20 ರಂದು ಬೆಂಗಳೂರಿಗೆ ಹೊರಟಿದ್ದರು. ಆದರೆ ಅವರು ಬೆಂಗಳೂರಿಗೆ ಬಾರದೇ ನಾಪತ್ತೆಯಾಗಿದ್ದರು.ಅಲ್ಲದೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು, ಈ ಕುರಿತು ಸಂಬಂಧಿಕರು ಜೂನ್ 21 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬಹ್ರೈಚ್ ನಲ್ಲಿರುವ ಪಾಳು ಬಾವಿಯಲ್ಲಿ ಶಾದಾಬ್ ಶವ ಪತ್ತೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಚಾಕುವಿನಿಂದ ಇರಿದ ಗಾಯದ ಗುರುತುಗಳೂ ಕಂಡುಬಂದಿದೆ. ಬಳಿಕ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಮೊಬೈಲ್ ಲೊಕೇಶನ್ ಮೂಲಕ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಅಪ್ರಾಪ್ತರು ಆಂಡ್ರಾಯಿಡ್ ಮೊಬೈಲ್ ನಲ್ಲಿ ರೀಲ್ಸ್ ಗಳನ್ನು ಮಾಡುತ್ತಿದ್ದರು. ಆದರೆ ಉತ್ತಮ ಗುಣಮಟ್ಟದ ವಿಡಿಯೋಗಳು ಬರುತ್ತಿರಲಿಲ್ಲ . ಐಫೋನ್ ಇದ್ದರೆ ಅದರಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಗಳನ್ನು ತೆಗೆಯಬಹುದು. ಅಲ್ಲದೆ ಹೆಚ್ಚಿನ ಜನರು ವಿಡಿಯೋ ಗಳಿಗೆ ಲೈಕ್ ಕೊಡುತ್ತಾರೆ ಎಂದುಕೊಂಡು ಐಫೋನ್ ಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ .

ಆದರೆ ಅಷ್ಟೊಂದು ಹಣ ಇವರ ಬಳಿ ಇಲ್ಲದ ಕಾರಣ, ಯಾರ ಬಳಿ ಐಫೋನ್ ಇದೆಯೋ ಅವರ ಬಳಿಯಿಂದ ಹೇಗಾದರು ಮಾಡಿ ಕಸಿದುಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದರು .ಅದರಂತೆ ಅದಕ್ಕೆ ಸರಿಯಾಗಿ ಶುಭ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಶಾದಾಬ್ ಅಪ್ರಾಪ್ತರ ಕಣ್ಣಿಗೆ ಬಿದ್ದಿದ್ದಾನೆ. ಆದರೆ ಶಾದಾಬ್ ಬಳಿ ಐಫೋನ್ ಇರುವುದು ಗೊತ್ತಾಗಿದೆ .

ಹೇಗಾದರೂ ಮಾಡಿ ಆತನ ಕೈಯಿಂದ ಐಫೋನ್ ಪಡೆದುಕೊಳ್ಳಬೇಕು ಎಂದು ಆಲೋಚಿಸಿ ಮನೆಗೆ ತೆರಳುವ ವೇಳೆ ಆತನನ್ನು ಅಡ್ಡ ಹಾಕಿ ಆತನ ಕುತ್ತಿಗೆಗೆ ಚಾಕುವಿನಿಂದ ಇರಿದು, ಬಳಿಕ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ, ಇನ್ನು ಯಾರಿಗೂ ವಿಚಾರ ಗೊತ್ತಾಗಬಾರದೆಂದು ಮೃತದೇಹವನ್ನು ಊರಿನಲ್ಲಿದ್ದ ಪಾಳು ಬಾವಿಗೆ ಹಾಕಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
