ಮಂಗಳೂರಿನ ತ್ವರಿತಗತಿಯ ವಿಶೇಷ ನ್ಯಾಯಾಲಯ (ಪೋಕ್ಸೊ) 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದೆ.
ಆರೋಪಿಯನ್ನು ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಬಸ್ತಿಗುಡ್ಡೆ ಮನೆ ನಿವಾಸಿ ಮನ್ಸೂರ್ ಯಾನೆ ಮುಹಮ್ಮದ್ ಮನ್ಸೂರ್ ಯಾನೆ ಜಾಬೀರ್(30) ಎಂದು ಗುರುತಿಸಲಾಗಿದೆ.

2023ರ ಮೇ 30ರಂದು ಬಾಲಕಿಯನ್ನು ಆರೋಪಿಯು ಬೆದರಿಸಿ ಅತ್ಯಾಚಾರಗೈದು ವಿಡಿಯೋ ಮಾಡಿದ್ದ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ 2023ರ ಡಿಸೆಂಬರ್ 23ರಂದು ಪ್ರಕರಣ ದಾಖಲಾಗಿತ್ತು. ಆದರೆ ಬಾಲಕಿ ದೂರು ನೀಡಿದೊಡನೆ ಆರೋಪಿಯು 8 ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಆ ಬಳಿಕ 2024ರ ಜುಲೈ 2ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಗುರುರಾಜ್ ಭಾಗಶಃ ತನಿಖೆ ಪೂರ್ಣಗೊಳಿಸಿದ್ದು, ಮುಂದಿನ ತನಿಖೆಯನ್ನು ಇನ್‌ಸ್ಪೆಕ್ಟರ್ ರಾಜೆಂದ್ರ ಬಿ. ನಡೆಸಿ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಮನು ಕೆ.ಎಸ್. ಅವರು ಆರೋಪಿಗೆ ಅತ್ಯಾಚಾರದ ಆರೋಪದಡಿ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ಹಾಗೂ ಬೆದರಿಸಿದ್ದಕ್ಕಾಗಿ 5,000 ರೂ.ದಂಡ ಮತ್ತು 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.



