ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿ 2.2 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಕದ್ದಿದ್ದ ಆರೋಪಿಯನ್ನು ಕೊನೆಗೂ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಸತೀಶ್(23) ಎಂದು ಗುರುತಿಸಲಾಗಿದೆ.

ಜುಲೈ 3 ರಿಂದ 22ರ ಅವಧಿಯಲ್ಲಿ ಸುಮಾರು 2.2 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿಂದ ಕಳವು ಮಾಡಲಾಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೆ ಅಡಿಕೆ ಕಳ್ಳನ ಜಾಡು ಹಿಡಿದ ಪೊಲೀಸರು ಕಳ್ಳನನ್ನು ಪತ್ತೆಹಚ್ಚಿ ಆತನಿಂದ 74,000 ರೂ. ಮೌಲ್ಯದ 15 ಚೀಲ ಒಣ ಅಡಿಕೆ, ಅಡಿಕೆಯನ್ನು ಮಾರಾಟ ಮಾಡಿ ಪಡೆದಿದ್ದ 70 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನ ಸೇರಿ ಒಟ್ಟು 2,24,000 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ಧಾರೆ.

ಸದ್ಯ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



