ಬಾಹ್ಯಾಕಾಶ ಯಾನ ಮುಗಿಸಿ ಭೂಮಿಗೆ ಮರಳಿದ ಶುಭಾಂಶು ಶುಕ್ಲಾ

ನವದೆಹಲಿ: ಆಕ್ಸಿಯಮ್ -4 ಮಿಷನ್ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇನ್ನೂ ಮೂವರು ಗಗನಯಾತ್ರಿಗಳ ತಂಡ 18 ದಿನಗಳ ಬಾಹ್ಯಾಕಾಶ ಪ್ರವಾಸ ಮುಗಿಸಿ ಇಂದು (ಜು.15) ಭೂಮಿಗೆ ಮರಳಿದ್ದಾರೆ.

ಮಧ್ಯಾಹ್ನ 3 ಗಂಟೆಯ ನಂತರ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನೌಕೆ ಲ್ಯಾಂಡ್‌ ಆಗಿದೆ.

ಆಕ್ಸಿಯಂ-4 ಯೋಜನೆಯ ಭಾಗವಾಗಿದ್ದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್‌ ಗ್ರೇಸ್‌ ಬಾಹ್ಯಾಕಾಶ ನೌಕೆಯು ಭಾರತೀಯ ಕಾಲಮಾನ ಸೋಮವಾರ ಸಂಜೆ 4:45ಕ್ಕೆ ಐಎಸ್‌ಎಸ್‌ನಿಂದ ಬೇರ್ಪಟ್ಟಿತು.

ಪರಸ್ಪರ ಅಪ್ಪುಗೆ, ಹಸ್ತಲಾಘವದ ಬಳಿಕ ಸ್ಪೇಸ್‌ಸೂಟ್‌ಗಳನ್ನು ಧರಿಸಿದ ಗಗನಯಾನಿಗಳು ನಿಲ್ದಾಣದಿಂದ ಬೇರ್ಪಡುವಿಕೆಯ 2 ಗಂಟೆ ಮುಂಚೆಯೇ ನೌಕೆಯನ್ನು ಪ್ರವೇಶಿಸಿದರು. ಬಳಿಕ ನಿಲ್ದಾಣಕ್ಕೂ ನೌಕೆಯ ನಡುವಿನ ದ್ವಾರವನ್ನು ಮಧ್ಯಾಹ್ನ 2:37ಕ್ಕೆ ಮುಚ್ಚಿದರು. ಬಳಿಕ 2 ಬಾರಿ ಥಸ್ಟರ್‌ಗಳನ್ನು ದಹಿಸುವ ಮೂಲಕ ಸಂಜೆ 4:45ಕ್ಕೆ ನೌಕೆಯು ಬೇರ್ಪಟ್ಟಿತು. ನಿಗದಿತ ಸಮಯಕ್ಕಿಂತ 10 ನಿಮಿಷ ತಡವಾಗಿ ಈ ಪ್ರಕ್ರಿಯೆ ಪೂರ್ಣಗೊಂಡಿತು.

ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯರಾಗಿದ್ದಾರೆ.

Leave a Reply

Your email address will not be published. Required fields are marked *