Breaking
26 Mar 2026, Thu

ಮರಣ ಕೂಪವಾಗುತ್ತಿರುವ ಮಾಣಿ- ಮೈಸೂರು ರಾ.ಹೆ ಪುತ್ತೂರಿನ ಮುರ ಜಂಕ್ಷನ್: ಸಮಸ್ಯೆ ಸರಿಪಡಿಸಲು ಸಾರ್ವಜನಿಕರ ಒತ್ತಾಯ

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ಮುರ ಎಂಬ ಜಂಕ್ಷನ್ ಇತ್ತೀಚಿನ ದಿನಗಳಲ್ಲಿ ಅಫಘಾತಗಳ ವಲಯವಾಗಿ ಬದಲಾಗಿದ್ದು ಪ್ರತಿದಿನವೂ ಇಲ್ಲಿ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದ್ದು, ಜನರ ಪ್ರಾಣವನ್ನೂ ಬಲಿ ಪಡೆದುಕೊಳ್ಳುತ್ತಿವೆ.

ಇಲ್ಲಿನ ಮುರ ಜಂಕ್ಷನ್ ನಿಂದ ಕೆದಿಲ ಸಂಪರ್ಕಸುವ ರಸ್ತೆಯಿದ್ದು, ಹೆದ್ದಾರಿಯನ್ನು ದಾಟಿಯೇ ಈ ರಸ್ತೆಯನ್ನು ಸೇರಬೇಕಾದ ಸ್ಥಿತಿ ಇಲ್ಲಿದೆ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಈ ಮುರ ಜಂಕ್ಷನ್ ಬಳಿ ಇದ್ದ ರೈಲ್ವೇ ಗೇಟ್ ಗೆ ಓವರ್ ಬ್ರಿಡ್ಕ್ ಮಾಡಿದ ಕಾರಣಕ್ಕೆ ಹೆದ್ದಾರಿಗೆ ಸಂಪರ್ಕಿಸಲು ಹೊಸ ಮಾರ್ಗವನ್ನು ಸಿದ್ಧಪಡಿಸಲಾಗಿತ್ತು.

ಆದರೆ ಈ ಮಾರ್ಗ ಇಂದು ಹಲವಾರು ಅಪಘಾತಗಳಿಗೆ ಎಡೆಮಾಡಿ ಕೊಟ್ಟಿದೆ. ಹೊಸದಾಗಿ ನಿರ್ಮಾಣಗೊಂಡ ಈ ಸೇತುವೆಯು ಅವೈಜ್ಞಾನಿಕವಾಗಿರುವ ಕಾರಣಕ್ಕೆ ಈ ಅಫಘಾತಗಳು ಸಂಭವಿಸುತ್ತಿದೆ. ಮುರದಿಂದ ಕೆದಿಲಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಮಧ್ಯೆ ರಲ್ವೇ ಹಳಿ ಹಾದು ಹೋಗುತ್ತಿತ್ತು. ಇದರಿಂದಾಗಿ ಇಲ್ಲಿ ವಾಹನ ದಟ್ಟನೆ ಹಚ್ಚಾಗುತ್ತಿತ್ತು. ಈ ಕಾರಣಕ್ಕೆ ಇಲ್ಲಿ ಓವರ್ ಬ್ರಿಡ್ಜ್ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಅನುಗುಣವಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.

ಆದರೆ ಈ ಸೇತುವೆ ಮತ್ತು ಸಂಪರ್ಕ ಮಾರ್ಗ ಸಂಪೂರ್ಣ ಅವೈಜ್ಞಾನಿಕವಾಗಿರುವ ಕಾರಣಕ್ಕೆ ಮುರ ಜಂಕ್ಷನ್ ನಲ್ಲಿ ಅಫಘಾತಗಳು ಸಂಭವಿಸುತ್ತಿವೆ ಅನ್ನುವುದು ಸ್ಥಳೀಯರ ಆರೋಪವಾಗಿದೆ. ಕೆದಿಲ ಭಾಗದಿಂದ ಮುರ ಜಂಕ್ಷನ್ ಸಂಪರ್ಕಿಸುವ ರಸ್ತೆಯನ್ನು ಇಳಿಜಾರಾಗಿ ಮಾಡಲಾಗಿದ್ದು, ಹೆದ್ದಾರಿಯು ಈ ಸಂಪರ್ಕ ರಸ್ತೆಗೆ ಸರಿಯಾಗಿ ಕಾಣದ ಕಾರಣ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಕ್ಕೆ ಕಾರಣವಾಗಿದೆ. ಪ್ರತಿನಿತ್ಯವೂ ಇಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇದ್ದು, ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಇಂತಹ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಸ್ಥಳೀಯರಲ್ಲಿ ಕೆಲವೊಂದು ಮಾಹಿತಿಗಳನ್ನು ಸಂಗ್ರಹ ಮಾಡೋದು ಅಧಿಕಾರಿ ಕರ್ತವ್ಯವಾಗಿದೆ. ಆದರೆ ಮುರದಲ್ಲಿ ಮಾತ್ರ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳದೆ ಏಕಾಏಕಿ ನಿರ್ಮಿಸಿರುವ ಕಾರಣ ಇಂದು ಈ ಪರಿಸ್ಥಿತಿ ಎಸುರಾಗಲು ಕಾರಣ ಎನ್ನಲಾಗಿದೆ. ಹೆದ್ದಾರಿ ಇಲಾಖೆಗಳು ಅವರಿಗೆ ತೋಚಿದಂತೆ ಸರ್ವೆ ಮಾಡಿ, ನಕ್ಷೆ ತಯಾರಿಸುತ್ತಾರೆ. ಆದರೆ ಆ ಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದಿಲ್ಲ.

ಕನಿಷ್ಟ ಪಕ್ಷ ಸಂಬಂಧಪಟ್ಟ ಗ್ರಾಮಪಂಚಾಯತ್ ಗಳ ಅವಗಾಹನೆಗೂ ತರುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳು ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಇದೀಗ ಮಾಣಿ-ಮೈಸೂರು ರಸ್ತೆಯ ಅಗಲೀಕರಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಿದ್ದು, ಇಲಾಖೆ ಪಂಚಾಯತ್ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿದೆ ಎನ್ನುವ ಒತ್ತಾಯಗಳೂ ಇವೆ. ಮುರದಲ್ಲಿ ಇತ್ತೀಚೆಗೆ ಹೆಚ್ಚಾಗಿ ಸಂಭವಿಸುತ್ತಿರುವ ಅಪಘಾತಗಳ ತಡೆ ಬಗ್ಗೆ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯಗಳೂ ಕೇಳಿ ಬರಲಾರಂಭಿಸಿದೆ.

ಪ್ರತಿದಿನವೂ ಇಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದ್ದು, ಬಡಪಾಯಿ ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಹೆದ್ದಾರಿ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *