ಉಪ್ಪಿನಂಗಡಿ: ಖೋಟಾ ನೋಟು ತಯಾರಿಸುತ್ತಿದ್ದ ಅಡ್ಡೆ ಮೇಲೆ ಉಪ್ಪಿನಂಗಡಿ ಪೊಲೀಸರು ಜುಲೈ 15ರ ಬುಧವಾರ ತಡರಾತ್ರಿ ದಾಳಿ ನಡೆಸಿ, ಸ್ಥಳೀಯ ವ್ಯಕ್ತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಣಿಯೂರು ಗ್ರಾಮದ ಪದ್ಮುಂಜ ಸಮೀಪದ ಕೊರಿಂಜ ಅಡೆಂಜದಲ್ಲಿ ಖೋಟಾ ನೋಟು ತಯಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.

ದಾಳಿಯ ವೇಳೆ ಖೋಟಾ ನೋಟು ತಯಾರಿಕೆಗೆ ಬಾಡಿಗೆ ಕಟ್ಟಡ ಒದಗಿಸಿದ್ದ ಸ್ಥಳೀಯ ವ್ಯಕ್ತಿಯೂ ಸೇರಿದಂತೆ ಏಳು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಸ್ಥಳದಿಂದ ಒಂದು ಬದಿಯಲ್ಲಿ ಮುದ್ರಿತವಾಗಿದ್ದ ಖೋಟಾ ನೋಟುಗಳು ಹಾಗೂ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಯಂತ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


