Breaking
4 Sep 2026, Fri

ತಲ್ಲೂರಿನಲ್ಲಿ ನಾಪತ್ತೆಯಾಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ ಪತ್ತೆ

ಕುಂದಾಪುರ: ತಲ್ಲೂರಿನ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದ ವೃದ್ಧರೊಬ್ಬರು ಮೆರ್ಡಿ ಮನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮೃತರನ್ನು ಹಕ್ಲುಮನೆ ನಿವಾಸಿ ಮುತ್ತಾ ಪೂಜಾರಿ (84) ಎಂದು ಗುರುತಿಸಲಾಗಿದೆ. ಅವರು ತೀವ್ರ ಕಾಲು ನೋವು ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಜುಲೈ 15ರಂದು ಮಧ್ಯಾಹ್ನ ತಲ್ಲೂರಿನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಬುಧವಾರ ಬೆಳಿಗ್ಗೆ ತಲ್ಲೂರಿನ ಮೆರ್ಡಿ ಮನೆ ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮೃತರ ಸಂಬಂಧಿ ಗೋವಿಂದ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *