Breaking
16 Jul 2026, Thu

ಧಾರವಾಡದಲ್ಲಿ ತಜ್ಞ ವೈದ್ಯನ ಹತ್ಯೆ: ಪತ್ನಿ ವಿರುದ್ಧ ಕೊಲೆ ಆರೋಪ, ಪುತ್ರನ ಸ್ಥಿತಿ ಗಂಭೀರ

ಧಾರವಾಡ: ನಗರದ ಬಾರಾಕೊಟ್ರಿಯ ಅಪಾರ್ಟ್‌ಮೆಂಟ್‌ನಲ್ಲಿ ಅರವಳಿಕೆ ತಜ್ಞ ವೈದ್ಯರೊಬ್ಬರು ಹತ್ಯೆಯಾಗಿದ್ದು, ಅವರ ಎಂಟು ವರ್ಷದ ಪುತ್ರನ ಮೇಲೂ ಚಾಕುವಿನಿಂದ ದಾಳಿ ನಡೆದಿರುವ ಘಟನೆ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ವೈದ್ಯರ ಪತ್ನಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಚಿರಾಯು ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕಿರಣ್ ಹೊನ್ನಣ್ಣವರ (45) ಮೃತಪಟ್ಟವರು. ವೈದ್ಯೆಯಾಗಿರುವ ಪತ್ನಿ ಪ್ರಿಯಾಂಕಾ ಕೊಲೆ ಮಾಡಿರುವ ಶಂಕೆ ಕೇಳಿ ಬಂದಿದೆ. ಪುತ್ರ ನಿಹಿತ್ (8) ಬುದ್ಧಿಮಾಂದ್ಯನಾಗಿದ್ದು, ಹೆತ್ತ ಕರುಳು ಎಂಬುದನ್ನು ನೋಡದೇ ಪುತ್ರನ ಮೇಲೆ ದಾಳಿ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ 14ರ ಮಂಗಳವಾರ ರಾತ್ರಿ ದಂಪತಿ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಬಳಿಕ ಪತಿ ಹಾಗೂ ಪುತ್ರ ಮಲಗಿದ್ದ ವೇಳೆ ಪತ್ನಿ ಪ್ರಿಯಾಂಕಾ ಚಾಕುವಿನಿಂದ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಜುಲೈ 15 ರ ಬುಧವಾರ ಮಧ್ಯಾಹ್ನದವರೆಗೂ ಡಾ. ಕಿರಣ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಮನೆಗೆ ತೆರಳಿ ಪರಿಶೀಲಿಸಿದಾಗ ಅನುಮಾನ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉಪನಗರ ಠಾಣೆ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ವೈದ್ಯರು ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುತ್ರ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.

ಪತ್ನಿ ಪ್ರಿಯಾಂಕಾ ಅಸ್ವಸ್ಥ ಸ್ಥಿತಿಯಲ್ಲಿ ಮನೆಯಲ್ಲೇ ಇದ್ದು, ಆಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಕೆಲವು ಔಷಧಿಗಳು ಹಾಗೂ ಇಂಜೆಕ್ಷನ್‌ಗಳು ಪತ್ತೆಯಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ನಾಲ್ಕೈದು ಡೋಸ್ ಇನ್ಸುಲಿನ್ ಸೇವಿಸಿ ಶುಗರ್ ಪ್ರಮಾಣ ಕಡಿಮೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ವಶಕ್ಕೆ ಪಡೆದಿರುವ ಪೋಲಿಸರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆಯನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚುತ್ತಿದ್ದಾರೆ.

Leave a Reply

Your email address will not be published. Required fields are marked *