ಕಾಸರಗೋಡು: ಕಾರಂತಾಕಡ್ ಜಂಕ್ಷನ್‌ನಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯ ಇದೀಗ ಹೊರಬಿದ್ದಿದ್ದು, ಅಪಘಾತದ ತೀವ್ರತೆಯನ್ನು ಬಯಲಿಗೆಳೆದಿದೆ.

ಜಂಕ್ಷನ್‌ನಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಬಳಿಕ, ಇನ್ನೋವಾ ಕಾರು ನಿಯಂತ್ರಣ ತಪ್ಪಿ ಹಲವು ಬಾರಿ ಪಲ್ಟಿಯಾಗಿ ರಸ್ತೆಯಲ್ಲಿ ದೂರದವರೆಗೆ ಉರುಳುತ್ತಾ ವಿದ್ಯುತ್ ಕಂಬ ಹಾಗೂ ಕಟ್ಟಡದ ಗೋಡೆಯ ಸಮೀಪ ಬಂದು ನಿಂತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮಂಗಳೂರಿನಿಂದ ಕಾರಂತಾಕಡ್ ಕಡೆಗೆ ಸಹೋದರ-ಸಹೋದರಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ, ವಾಹನದಲ್ಲಿದ್ದ ಎಲ್ಲಾ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ತೆರೆದ ಪರಿಣಾಮ ಇಬ್ಬರೂ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅದೇ ವೇಳೆ, ಮಧೂರು ಭಾಗದಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ಮನೆಗೆ ಮರಳುತ್ತಿದ್ದ ಎರಿಯಾಳ ಮೂಲದ ಯುವತಿ, ಅವರ ತಾಯಿ ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದ ಮಾರುತಿ ಎಕ್ಸ್‌ಪ್ರೆಸ್ಸೋ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಕಾರಿನ ಮುಂಭಾಗದ ಏರ್‌ಬ್ಯಾಗ್‌ಗಳೂ ಕಾರ್ಯನಿರ್ವಹಿಸಿದ್ದರಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

ಅಪಘಾತದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರಂತಾಕಡ್ ಜಂಕ್ಷನ್‌ನ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಮತ್ತೆ ಆತಂಕ ವ್ಯಕ್ತವಾಗಿದೆ.

ಈ ಜಂಕ್ಷನ್‌ನಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ವೇಗ ಮಿತಿ ನಿಯಂತ್ರಣ, ಸಮರ್ಪಕ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಹಾಗೂ ಶಾಶ್ವತ ರಸ್ತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


