Breaking
15 Jul 2026, Wed

ವರದಕ್ಷಿಣೆ ಕಿರುಕುಳ ಪ್ರಕರಣ: ಪಿಎಸ್ಐ ಬಂಧನ, ಪತ್ನಿ ದೂರು ಆಧರಿಸಿ ಕ್ರಮ

ಬೆಂಗಳೂರು: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ, ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ ಆರೋಪದಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಕಂಟ್ರೋಲ್ ರೂಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಬೈರಪ್ಪ ಅವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.


ಕೆಂಚನಾಪುರ ನಿವಾಸಿಯಾಗಿರುವ ಬೈರಪ್ಪ ವಿರುದ್ಧ ಅವರ ಪತ್ನಿ ರೇವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಕೃತ್ಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ತಾವರೆಕೆರೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


ಪೊಲೀಸರ ಮಾಹಿತಿ ಪ್ರಕಾರ, ಐದು ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದು, ಅವರಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಕಳೆದ ಕೆಲವು ತಿಂಗಳಿಂದ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿತ್ತು. ಬೈರಪ್ಪ ಪರಸ್ತ್ರೀ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.


ಜುಲೈ 12ರಂದು ನಡೆದ ಜಗಳದ ವೇಳೆ, ತವರು ಮನೆಯಿಂದ ₹50 ಲಕ್ಷ ತರುವಂತೆ ಒತ್ತಾಯಿಸಿ ಬೈರಪ್ಪ ಹಲ್ಲೆ ನಡೆಸಿದ್ದು, ಅವರ ಕುಟುಂಬ ಸದಸ್ಯರೂ ಸಹಕರಿಸಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ.


ರೇವತಿ ಅವರು, ಮೊದಲಿಗೆ ಕೆಂಗೇರಿ ಠಾಣೆಯಲ್ಲಿ ದೂರು ನೀಡಿದಾಗ ಕೇವಲ ಎನ್ಸಿಆರ್ ದಾಖಲಿಸಿ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಡಿಜಿಪಿ ಕಚೇರಿಗೆ ತೆರಳಿ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವರದಕ್ಷಿಣೆ ವಿಚಾರವಾಗಿ ನಿರಂತರ ಹಿಂಸೆ ನೀಡುತ್ತಿದ್ದ ಪತಿ, ವಿಚ್ಛೇದನಕ್ಕೆ ಒತ್ತಾಯಿಸಿದ್ದು, ನನ್ನ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಲು ರೌಡಿಗಳನ್ನು ಮನೆ ಬಳಿ ಕರೆಸಿಕೊಂಡಿದ್ದರು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.


ಪ್ರಾಥಮಿಕ ವಿಚಾರಣೆಯಲ್ಲಿ ಘಟನೆ ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಾಗಿದೆ.


ಇದೇ ವೇಳೆ, ಬೈರಪ್ಪ ಈ ಹಿಂದೆ ಲೋಕಾಯುಕ್ತ ಪೊಲೀಸರ ಲಂಚ ಬಲೆಗೆ ಸಿಲುಕಿ ಅಮಾನತುಗೊಂಡಿದ್ದರೆಂದು ತಿಳಿದುಬಂದಿದೆ. ಪ್ರಕರಣದ ಕುರಿತು ತಾವರೆಕೆರೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *