Breaking
15 Jul 2026, Wed

ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ: ಬಂಟ್ವಾಳದ ಯುವಕ ಸೇರಿ 10 ಭಾರತೀಯರ ರಕ್ಷಣೆ

ಬಂಟ್ವಾಳ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಡುವೆಯೇ ಒಮಾನ್ ಕರಾವಳಿಯಲ್ಲಿ ಜೆಎಫ್ಎಸ್ ಗ್ಯಾಲಕ್ಸಿ (JFS Galaxy) ಹೆಸರಿನ ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕ ಸೇರಿ 10 ಭಾರತೀಯರನ್ನು ಒಮಾನ್ ನೌಕಾಪಡೆ ಸುರಕ್ಷಿತವಾಗಿ ರಕ್ಷಿಸಿದೆ.


ರಕ್ಷಿಸಲ್ಪಟ್ಟವರಲ್ಲಿ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರೋಹಿತಾಕ್ಷ ಭಾಣಬೆಟ್ಟು ಅವರ ಪುತ್ರ ರಚನ್ ಆರ್. ಕೆ. (25) ಕೂಡ ಇದ್ದಾರೆ. ಪ್ರಸ್ತುತ ಅವರು ಒಮಾನ್ನಲ್ಲಿ ತಮ್ಮ ಶಿಪ್ಪಿಂಗ್ ಕಂಪೆನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ಬಳಿಕ ದುಬೈಗೆ ಪ್ರಯಾಣ ಬೆಳೆಸಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.


ರಚನ್ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಮುಗಿಸಿ ವಾಣಿಜ್ಯ ಹಡಗು ಸೇವೆಗೆ ಸೇರಿದ್ದರು.


ದಾಳಿಯ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ ರಚನ್, ಹಡಗಿನ ಮೇಲೆ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ದೊರೆತಿದ್ದರೂ, ಹಡಗು ತನ್ನ ಪ್ರಯಾಣ ಮುಂದುವರಿಸಿತ್ತು ಎಂದು ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಸುಮಾರು 2.05 ಗಂಟೆಗೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಎಂಜಿನ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಜೀವ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದಿದ್ದಾರೆ.


ಈ ವೇಳೆ ಪುಣೆಯ ನಿವಾಸಿಯಾಗಿದ್ದ ಒಬ್ಬ ಸಹೋದ್ಯೋಗಿ ನಾಪತ್ತೆಯಾಗಿದ್ದು, ಉಳಿದ ಸಿಬ್ಬಂದಿಯನ್ನು ಒಮಾನ್ ನೌಕಾಪಡೆ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಅಗತ್ಯ ನೆರವು ನೀಡಿದೆ ಎಂದು ರಚನ್ ತಿಳಿಸಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿದ ರಚನ್ ಅವರ ತಂದೆ ರೋಹಿತಾಕ್ಷ ಭಾಣಬೆಟ್ಟು, “ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ನಾವು ಆತಂಕದಲ್ಲಿದ್ದೆವು. ಹಡಗಿನ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿದಾಗ ತೀವ್ರ ಕಳವಳ ಉಂಟಾಯಿತು. ಆದರೆ ಮಗ ಸುರಕ್ಷಿತವಾಗಿರುವ ಮಾಹಿತಿ ನೀಡಿದ ಬಳಿಕ ನಿರಾಳವಾಗಿದೆ.

ಅವನ ಸಹೋದ್ಯೋಗಿ ನಾಪತ್ತೆಯಾಗಿರುವುದು ದುಃಖದ ಸಂಗತಿ. ನನ್ನ ಮಗ ಸೇರಿದಂತೆ ಭಾರತೀಯರನ್ನು ರಕ್ಷಿಸಿದ ಒಮಾನ್ ನೌಕಾಪಡೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರೂ ಶೀಘ್ರವೇ ತಾಯ್ನಾಡಿಗೆ ಮರಳಲಿ” ಎಂದು ಹೇಳಿದರು.


ರಚನ್ ಅವರ ಸಂಬಂಧಿ ಉದಯ್ ಪ್ರತಿಕ್ರಿಯಿಸಿ, “ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಆತ ಆಗಾಗ ಹೇಳುತ್ತಿದ್ದ. ಈಗ ಆತ ಸುರಕ್ಷಿತವಾಗಿರುವ ಸುದ್ದಿ ತಿಳಿದು ಕುಟುಂಬಕ್ಕೆ ನೆಮ್ಮದಿ ಸಿಕ್ಕಿದೆ. ಆದಷ್ಟು ಬೇಗ ಭಾರತಕ್ಕೆ ಮರಳಲಿ ಎಂಬುದೇ ನಮ್ಮ ಆಶಯ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *