ಬಂಟ್ವಾಳ: ಗುಡ್ಡದಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಮೊಡಂಕಾಪು ಗ್ರಾಮದ ರಾಜೀವ ಪಲಿಕೆ ಎಂಬಲ್ಲಿ ಜುಲೈ 14ರ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಕೃಷ್ಣಪ್ಪ ಕುಲಾಲ್ (82) ಎಂದು ಗುರುತಿಸಲಾಗಿದೆ.

ಮನೆಯ ಸಮೀಪದಲ್ಲಿರುವ ಶಂಭೂರು ಎಎಂಆರ್ ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುವ 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಸೊಪ್ಪು ಕಡಿಯುತ್ತಿದ್ದ ವೇಳೆ ಅವರಿಗೆ ವಿದ್ಯುತ್ ಸ್ಪರ್ಶಗೊಂಡು ತೀವ್ರ ಆಘಾತ ಉಂಟಾಗಿದೆ.

ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.




