ಹಾರ್ಮುಜ್ ಜಲಸಂಧಿಯಲ್ಲಿ ಯುಎಇ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್ಗಳ ಮೇಲೆ ಇರಾನ್ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ, ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, 6 ಮಂದಿ ಭಾರತೀಯರು ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ.

ಯುಎಇ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಒಮಾನ್ ಜಲಪ್ರದೇಶದ ವ್ಯಾಪ್ತಿಯಲ್ಲಿರುವ ಹಾರ್ಮುಜ್ ಜಲಸಂಧಿಯ ದಕ್ಷಿಣ ಭಾಗದ ಹಡಗು ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಹೆಸರಿನ ತೈಲ ಟ್ಯಾಂಕರ್ಗಳು ದಾಳಿಗೆ ಒಳಗಾಗಿವೆ.

ದಾಳಿಯಲ್ಲಿ ‘ಮೊಂಬಾಸಾ’ ಟ್ಯಾಂಕರ್ನಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 6 ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಕ್ಷಿಪಣಿ ದಾಳಿಯಿಂದ ಎರಡೂ ಟ್ಯಾಂಕರ್ಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಗಮನಾರ್ಹ ಪ್ರಮಾಣದ ವಸ್ತು ಹಾನಿಯಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ದಾಳಿಯನ್ನು ಯುಎಇ ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಹಾಗೂ ಕಡಲ್ಗಳ್ಳತನಕ್ಕೆ ಸಮಾನವಾದ ಕೃತ್ಯ ಎಂದು ಆರೋಪಿಸಿದೆ. ಜಾಗತಿಕ ಇಂಧನ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವ ಇಂತಹ ಪ್ರಚೋದನಾರಹಿತ ದಾಳಿಗಳನ್ನು ಇರಾನ್ ತಕ್ಷಣವೇ ನಿಲ್ಲಿಸಬೇಕು ಎಂದು ಯುಎಇ ಆಗ್ರಹಿಸಿದೆ.


