ಮಂಗಳೂರು: ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸುಮಾರು 11 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಉಳ್ಳಾಲ ಮಾಸ್ತಿಕಟ್ಟೆಯ ಶಾಹುಲ್ ಹಮೀದ್ (40)ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಮೂರು ಹಾಗೂ ಗ್ರಾಮಾಂತರ, ಬಂದರು ಮತ್ತು ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಕೊಲೆ, ಕೊಲೆಯತ್ನ, ದರೋಡೆ, ಅಪಹರಣ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳು ಈತನ ಮೇಲಿವೆ.

2012ರಲ್ಲಿ ನಗರದ ಭವಂತಿ ಸ್ಟ್ರೀಟ್‌ನ ಕಾಂಚನ ಟೆಕ್ಸ್‌ಟೈಲ್ಸ್‌ನ ವ್ಯವಸ್ಥಾಪಕ ದಿನೇಶ್ ರಾಜ್ ಕೊಲೆ ಪ್ರಕರಣ ಹಾಗೂ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿ ಶಶಿಕಿರಣ್ ಮೇಲಿನ ಕೊಲೆಯತ್ನ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದಾನೆ.

2003ರ ಉಳ್ಳಾಲ ರಿಕ್ಷಾ ಚಾಲಕ ನರಸಿಂಹ ಶೆಟ್ಟಿಗಾರ್ ಕೊಲೆ ಹಾಗೂ 2005ರ ಗುರುಪುರದ ಪೊಳಲಿ ಅನಂತು ಕೊಲೆ ಪ್ರಕರಣಗಳಲ್ಲಿ ನ್ಯಾಯಾಲಯ ಈತನನ್ನು ಖುಲಾಸೆಗೊಳಿಸಿತ್ತು.

ಈತನ ವಿರುದ್ಧ ನ್ಯಾಯಾಲಯ ದಸ್ತಗಿರಿ ವಾರಂಟ್ ಹೊರಡಿಸಿದ್ದರೂ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ವಾರಂಟ್ ಜಾರಿಗೊಳಿಸದೆ ಪರಾರಿಯಾಗಿದ್ದ ಕಾರಣ ಈತನ ವಿರುದ್ಧ ಮತ್ತೊಂದು ಪ್ರಕರಣವೂ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



